ಬೀದರ್: ವಿದ್ಯುತ್ ಕಂಬಕ್ಕೆ ವ್ಯಕ್ತಿಯೋರ್ವನ ತಲೆ ಚಚ್ಚಿ ದುಷ್ಕರ್ಮಿಗಳು ಭೀಕರ ಕೊಲೆ ಮಾಡಿರುವ ಘಟನೆ ರವಿವಾರ ಬೆಳ್ಳಂ ಬೆಳಗ್ಗೆ ಬೀದರ್ ನ ಚಿಕ್ಕಪೇಟೆಯ ರಿಂಗ್ ರೋಡ್ ಹತ್ತಿರದಲ್ಲಿ ನಡೆದಿದೆ.
ಕಲ್ಲಪ್ಪ (28) ಕೊಲೆಯಾಗಿರುವ ದುರ್ದೈವಿ. ಆತ ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದ ನಿವಾಸಿ. ಜಿಲ್ಲೆಯ ಗಾಂಧಿಗಾಂಜ್ ನ ತಿರುಮಲ ಹೋಟೆಲ್ ನಲ್ಲಿ ಕೆಲಸ ಮಾಡುತಿದ್ದ ಆತ ಚಿಕ್ಕಪೇಟೆಯ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ. ನಸುಕಿನ ಜಾವ ಮನೆಯಿಂದ ಎದ್ದು ಹೋಗಿರುವಾಗ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಕೊಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಬೀದರ್ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.