24 ಗಂಟೆಯೊಳಗೆ ಬಿಜೆಪಿಯಿಂದ ದ್ವೇಷ ರಾಜಕಾರಣ: ಟಿಪ್ಪು ಜಯಂತಿ ನಿಷೇಧಕ್ಕೆ ಕಾಂಗ್ರೆಸ್ ಗರಂ

ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದ ಬಿಜೆಪಿ ಅಧಿಕಾರಕ್ಕೇರಿದ 24 ಗಂಟೆಯೊಳಗೆ ಟಿಪ್ಪು ಜಯಂತಿ ರದ್ದುಪಡಿಸಿ ದ್ವೇಷ ರಾಜಕಾರಣಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
24 ಗಂಟೆಯೊಳಗೆ ಬಿಜೆಪಿಯಿಂದ ದ್ವೇಷ ರಾಜಕಾರಣ: ಟಿಪ್ಪು ಜಯಂತಿ ನಿಷೇಧಕ್ಕೆ ಕಾಂಗ್ರೆಸ್ ಗರಂ
24 ಗಂಟೆಯೊಳಗೆ ಬಿಜೆಪಿಯಿಂದ ದ್ವೇಷ ರಾಜಕಾರಣ: ಟಿಪ್ಪು ಜಯಂತಿ ನಿಷೇಧಕ್ಕೆ ಕಾಂಗ್ರೆಸ್ ಗರಂ
ಬೆಂಗಳೂರು: ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದ ಬಿಜೆಪಿ ಅಧಿಕಾರಕ್ಕೇರಿದ 24 ಗಂಟೆಯೊಳಗೆ ಟಿಪ್ಪು ಜಯಂತಿ ರದ್ದುಪಡಿಸಿ ದ್ವೇಷ ರಾಜಕಾರಣಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

"ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ವಚನ ಭ್ರಷ್ಟ ಬಿಜೆಪಿ! ಕೇವಲ ಕೋಮುವಾದ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ/ಆರೆಸ್ಸೆಸ್‌ ಇತಿಹಾಸವನ್ನು, ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ." ಕಾಂಗ್ರೆಸ್ ಕರ್ನಾಟಕ ಘಟಕ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದೆ.

ಅಲ್ಲದೆ ಬಿಜೆಪಿ ಸರ್ಕಾರದ ಈ ಕ್ರಮದಿಂದ ರಾಜ್ಯ ಬಿಜೆಪಿಯ  ದ್ವಿಮುಖ ನೀತಿ ಬಹಿರಂಗವಾಗಿದೆ.ಎಂದೂ ಕಿಡಿ ಕಾರಿದೆ.

ಇನ್ನು ಟಿಪ್ಪು ಜಯಂತಿ ನಿಷೇದ ಮಾಡಿರುವ ಯಡಿಯೂರಪ್ಪ ಸರ್ಕಾರದ ನಿರ್ಧಾರ ಕುರಿತು ಮಾತನಾಡಿದ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ "ಇದು ದೊಡ್ಡ ತಪ್ಪು,  ಟಿಪ್ಪು ಅಲ್ಪಸಂಖ್ಯಾತರಿಗೆ ಸಿಮಿತವಾದವನಲ್ಲ, ಮೈಸೂರಿನ ರಾಜನಾಗಿ ಬ್ರಿಟಿಷರ ಜೊತೆಗೆ ಹೋರಾಡಿದ ಅಪ್ರತಿಮ ದೇಶಪ್ರೇಮಿ. ಕೆಆರ್ ಎಸ್ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೇ ಟಿಪ್ಪು. ಮೈಸೂರು ಪ್ರದೇಶದಲ್ಲಿ ಕೃಷಿ, ಕೈಗಾರಿಕೆ ಸೇರಿ ಅನೇಕ ಕ್ಷೇತ್ರಕ್ಕೆ ಟಿಪ್ಪು ಕೊಡುಗೆ ಸಂದಿದೆ,ಹಾಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ಪ್ರಾರಂಭಿಸಿದ್ದೆವು.ಇದರ ಹೊರತಾಗಿ ಬೇರೆ ಉದ್ದೇಶ ನಮ್ಮದಾಗಿರಲಿಲ್ಲ. ಯಡಿಯೂರಪ್ಪ ಸರ್ಕಾರದ ಈ ನಿರ್ಧಾರ ಅಲ್ಪಸಂಖ್ಯಾತರ ವಿರೋಧಿಯಾಗಿದೆ.ನಾನಿದನ್ನು ಖಂಡಿಸುತ್ತೇನೆ" ಎಂದಿದ್ದಾರೆ.

ಇನ್ನು ಈ ಬಾರಿ ಟಿಪ್ಪು ಜಯಂತಿಯನ್ನು ಕಳೆದೆಲ್ಲಾ ಬಾರಿಗಿಂತಲೂ ಹೆಚ್ಚು ಅದ್ದೂರಿಯಾಗಿ ಆಚರಿಸಿ ತೋರಿಸುತ್ತೇನೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಚಾಲೆಂಜ್ ಮಾಡಿದ್ದಾರೆ. 
"ನಮ್ಮ ರಾಜ್ಯ ಮಾತ್ರವಲ್ಲ ಇಡೀ ಭಾರತದಲ್ಲೇ ಟಿಪ್ಪು ಅಭಿಮಾನಿಗಳಿದ್ದಾರೆ.  ಯಾರು ಜಾತ್ಯಾತೀತ ಎಂದು ಇದ್ದಾರೋ ಅವರೆಲ್ಲರೂ ಟಿಪ್ಪು ಜಯಂತಿ ಆಚರಿಸುತ್ತಾರೆ.ಹಾಗಾಗಿ ಇನ್ನು ಮುಂದೆ ಕೂಡಾ ನಾವು ಜಯಂತಿ ಆಚರಣೆ ಮಾಡಿಯೇ ಮಾಡುತ್ತೇವೆ" ಅವರು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿ ಒಂದು ಕೋಮುವಾದಿ ಪಕ್ಷವಾಗಿದ್ದು, ಅಧಿಕಾರ ಹಾಗೂ ಸರ್ಕಾರವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಇದೊಂದು ಧರ್ಮವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪಕ್ಷ ಎಂದು ಟೀಕಿಸಿದರು.  

2016 ನವೆಂಬರ್ 10 ರಂದು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಇಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಮಾಡಿದೆ. 2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವುದಾಗಿ ಹೇಳಲಾಗಿದ್ದು ಇದೇ ಪ್ರಕಾರ ಆಚರಣೆ ರದ್ದು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com