ಎಸ್ಎಂಕೆ ನಿವಾಸಕ್ಕೆ ಗಣ್ಯರ ದಂಡು: ಕೃಷ್ಣ, ಮಾಳವಿಕಾಗೆ ಸಾಂತ್ವನ ಹೇಳಿದ ನಾಯಕರು

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ, ಕಫೆ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ ನಾಪತ್ತೆ ಪ್ರಕರಣ ಹಿನ್ನಲೆಯಲ್ಲಿ ನಗರದ ಸದಾಶಿವ ನಗರದ.....
ಸಿದ್ದರಾಮಯ್ಯ. ಎಸ್ಎಂ ಕೃಷ್ಣ, ರಮೇಶ್ ಕುಮಾರ್
ಸಿದ್ದರಾಮಯ್ಯ. ಎಸ್ಎಂ ಕೃಷ್ಣ, ರಮೇಶ್ ಕುಮಾರ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ, ಕಫೆ ಕಾಫಿಡೇ ಮಾಲೀಕ ವಿಜಿ ಸಿದ್ದಾರ್ಥ ನಾಪತ್ತೆ ಪ್ರಕರಣ ಹಿನ್ನಲೆಯಲ್ಲಿ ನಗರದ ಸದಾಶಿವ ನಗರದ ಎಸ್ಎಂಕೆ ನಿವಾಸಕ್ಕೆ ರಾಜಕೀಯ ಮುಖಂಡರು ಹಾಗೂ ಪ್ರಮುಖ ನಾಯಕರು ಭೇಟಿ ನೀಡಿ ಕೃಷ್ಣ ಹಾಗೂ ಮಾಳವಿಕಾ ಅವರಿಗೆ ಸಾಂತ್ವನ ಹೇಳಿದ್ದಾರೆ.
ಬೆಳಗ್ಗೆ 8 ಗಂಟೆಗೆ ಕೃಷ್ಣ ನಿವಾಸಕ್ಕೆ ಆಗಮಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಲ್ಲದೆ, ಸಿದ್ದಾರ್ಥ ಅವರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರಾಜ್ಯ, ಕೇಂದ್ರ ಮತ್ತು ಕರಾವಳಿ ರಕ್ಷಣಾ ಪಡೆಗಳನ್ನು ಬಳಸಿಕೊಂಡು ಆದಷ್ಟು ಶೀಘ್ರವಾಗಿ ವಿಜಿ ಸಿದ್ದಾರ್ಥ ಅವರನ್ನು ಪತ್ತೆ ಮಾಡಬೇಕೆಂದು ಕೃಷ್ಣ ಅವರು ಮುಖ್ಯಮಂತ್ರಿ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಗಮಿಸುತ್ತಿದ್ದಂತೆಯೇ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಕೆಲಹೊತ್ತು ಕುಟುಂಬ ಸದಸ್ಯರ ಜೊತೆ ಚರ್ಚಿಸಿದರು. ಸಿದ್ದಾರ್ಥ ಅವರು ಮೂರು ದಿನಗಳ ಹಿಂದೆ ತಮಗೆ ಕರೆ ಮಾಡಿ ಮಾತನಾಡಲು ಸಮಾಯಾವಕಾಶ ಕೇಳಿದ್ದರು. ಆದರೆ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯನ್ನು ಡಿ ಕೆ ಶಿವಕುಮಾರ್ ಸಿದ್ದಾರ್ಥ ಕುಟುಂಬ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸಿದ್ದಾರ್ಥ ಅವರ ಆರ್ಥಿಕ ವ್ಯವಹಾರಗಳು , ಸಾಲ, ಕಂಪನಿಗಳ ವ್ಯವಹಾರ, ನಷ್ಟದ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಜಿ ಸಿದ್ದಾರ್ಥ ಪತ್ನಿ  ಮಾಳವಿಕಾ ಹಾಗೂ ಮಕ್ಕಳಿಂದ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ.
ಕೃಷ್ಣಾ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ವೀರಪ್ಪ ಮೊಯ್ಲಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ಶಿವಶಂಕರ ರೆಡ್ಡಿ,   ಬಿ.ಎಲ್. ಶಂಕರ್, ಲೇಔಟ್ ಕೃಷ್ಣಪ್ಪ, ಚಲುವರಾಯಸ್ವಾಮಿ, ರೋಷನ್ ಬೇಗ್ , ಸಿ.ಟಿ.ರವಿ, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ, ಶಾಸಕರಾದ ಆರ್. ಅಶೋಕ್, ಬಸವರಾಜ್ ಬೊಮ್ಮಾಯಿ,ನರಸಿಂಹ ನಾಯಕ್, ಶ್ರೀರಾಮುಲು, ವಿ ಸೋಮಣ್ಣ , ಕುಮಾರ್ ಬಂಗಾರಪ್ಪ,  ಸುರೇಶ್ ಕುಮಾರ್, ಎನ್ಎ ಹ್ಯಾರಿಸ್, ನಟರಾದ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮಾಜಿ ಸಂಸದ ಶಿವರಾಮೇಗೌಡ, ಎಂ ವಿ ರಾಜಶೇಖರನ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ, ಮಾಜಿ ಸಚಿವ ಎಚ್ ಡಿ ರೇವಣ್ಣ, ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಆಗಮಿಸಿ ಎಸ್ಎಂ ಕೃಷ್ಣ ಹಾಗೂ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಎಸ್ಎಂ ಕೃಷ್ಣಾ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಲ್ಲದೆ ಆದಷ್ಟು ಶೀಘ್ರವಾಗಿ ಪ್ರಕರಣ ಪತ್ತೆ ಹೆಚ್ಚಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಕೃಷ್ಣ ಅವರಿಗೆ ಸಮಾಧಾನ ಹೇಳಿದ ಗೌಡರು ಆದಷ್ಟು ಶೀಘ್ರವಾಗಿ ವಿಜಿ ಸಿದ್ದಾರ್ಥ ಅವರು ವಾಪಸ್ ಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನಲ್ಲಿಯೇ ಆಗಮಿಸಿದ ವಿಧಾನ ಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೆ ಜೆ ಜಾರ್ಜ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷಾದ್, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ಕೃಷ್ಣ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇತ್ತೀಚಿನ ಬೆಳವಣಿಗಳ ಬಗ್ಗೆಯೂ ಚರ್ಚೆ ನಡೆಸಿದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com