ಕಾಫಿ ಬೆಳೆಗಾರನ ಮಗ ಸಿದ್ದಾರ್ಥ್ 'ಕಾಫಿ ಕಿಂಗ್' ಆಗಿ ಬೆಳೆದ ಪರಿ

ಮಲೆನಾಡು, ಕಾಫಿ ಬೆಳೆಯ ನೆಲೆವೀಡು ಚಿಕ್ಕಮಗಳೂರಿನ ಸಾವಿರಾರು ಕಾರ್ಮಿಕರಿಗೆ ಉದ್ಯಮಿ ವಿಜಿ...
ವಿ ಜಿ ಸಿದ್ದಾರ್ಥ್
ವಿ ಜಿ ಸಿದ್ದಾರ್ಥ್
Updated on
ಚಿಕ್ಕಮಗಳೂರು: ಮಲೆನಾಡು, ಕಾಫಿ ಬೆಳೆಯ ನೆಲೆವೀಡು ಚಿಕ್ಕಮಗಳೂರಿನ ಸಾವಿರಾರು ಕಾರ್ಮಿಕರಿಗೆ ಉದ್ಯಮಿ ವಿಜಿ ಸಿದ್ದಾರ್ಥ್ ನಾಪತ್ತೆ ಸುದ್ದಿ ಕೇಳಿ ಸಿಡಿಲು ಬಂದಪ್ಪಳಿಸಿದಂತೆ ಆಗಿತ್ತು.
ಸಿದ್ದಾರ್ಥ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನ ಚೀಕನಹಳ್ಳಿ ಎಸ್ಟೇಟ್ ನವರು. ಆದರೂ ಅವರು ಹಾಸನದ ಗಡಿ ಜಿಲ್ಲೆ ಕಾಫಿ ನಾಡು ಚಿಕ್ಕಮಗಳೂರಿನ ಜೊತೆ ನಂಟು ಬೆಳೆಸಿಕೊಂಡಿದ್ದು ಹೆಚ್ಚು. ಭಾರತೀಯ ಮಾರುಕಟ್ಟೆಯಲ್ಲಿ ಕಾಫಿಯನ್ನು ಪ್ರಚುರಪಡಿಸಲು ಸಿದ್ದಾರ್ಥ್ ಮೊದಲ ಬಾರಿಗೆ ಪ್ರಯೋಗ ನಡೆಸಿದ್ದೇ ಚಿಕ್ಕಮಗಳೂರಿನಿಂದ. 
1994ರಲ್ಲಿ ಅವರು ಆರಂಭಿಸಿದ ಅಮಲ್ಗಮೇಟೆಡ್ ಬೀನ್ಸ್ ಕಾಫಿ(ಎಬಿಸಿ) ಲಿಮಿಟೆಡ್ ಕಡೂರು-ಮಂಗಳೂರು ರಸ್ತೆಯಲ್ಲಿದ್ದು ಅಲ್ಲಿಯೇ ಕಾಫಿ ಮೇಲೆ ಸಂಶೋಧನೆ, ಮಾರುಕಟ್ಟೆ, ವಹಿವಾಟು, ಸಾಗಾಟ ಎಲ್ಲವೂ ನಡೆದಿದ್ದು.
ನಂತರ 1996ರಲ್ಲಿ ಸಿದ್ದಾರ್ಥ್ ಅವರು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮೊದಲ ಬಾರಿಗೆ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಕೆಫೆ ಕಾಫಿ ಡೇ ಸ್ಥಾಪನೆ ಮಾಡಿ ನಂತರ ಅದನ್ನು ವಿಸ್ತರಿಸಿ ದೇಶ ವಿದೇಶಗಳಲ್ಲಿ 1,750ಕ್ಕೂ ಹೆಚ್ಚು ಕಾಫಿ ಡೇ ಶಾಪ್ ಗಳನ್ನು ತೆರೆದರು.
ಸಿದ್ದಾರ್ಥ್ ಹೆಗ್ಡೆ ಅವರ ತಂದೆ ಗಂಗಯ್ಯ ಹೆಗ್ಡೆ ಕಾಫಿ ಎಸ್ಟೇಟ್ ಮಾಲೀಕರು. 2 ದಶಕಗಳಿಗೂ ಹೆಚ್ಚು ಕಾಲ ಕಾಫಿ ತೋಟ ಸಾಮ್ರಾಜ್ಯವನ್ನು ಚೆನ್ನಾಗಿ ನೋಡಿಕೊಂಡು ಹೋದವರು. 
ಪ್ರಾಥಮಿಕ, ಹೈಸ್ಕೂಲ್ ವ್ಯಾಸಂಗವನ್ನು ಚಿಕ್ಕಮಗಳೂರಿನಲ್ಲಿ ಪೂರೈಸಿದ ಸಿದ್ದಾರ್ಥ್ ನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ನಂತರ ಉದ್ಯಮ ಕ್ಷೇತ್ರದಲ್ಲಿಯೇ ಮುಂದುವರಿಯುವ ಆಸೆಯಿಂದ ಅದರಲ್ಲಿ ಹೆಚ್ಚಿನ ಅನುಭವ ಪಡೆಯಲು 22 ವರ್ಷದವರಾಗಿದ್ದಾಗ ಮುಂಬೈಗೆ ಪ್ರಯಾಣ ಬೆಳೆಸಿದರು. ಅಲ್ಲಿ ಜೆಎಂ ಫೈನಾನ್ಸ್ ಲಿಮಿಟೆಡ್ ನಲ್ಲಿ ತರಬೇತಿ ಪಡೆದು ಎರಡು ವರ್ಷ ಕಳೆದ ನಂತರ ಬೆಂಗಳೂರಿಗೆ ಬಂದರು. 
ಬೆಂಗಳೂರಿನಲ್ಲಿ ಉದ್ಯಮ ಆರಂಭಿಸಬೇಕೆಂಬ ಮಗನ ಆಸೆಗೆ ತಂದೆ ಗಂಗಯ್ಯ ಹೆಗ್ಡೆ ಒತ್ತಾಸೆಯಾಗಿ ನಿಂತು 5 ಲಕ್ಷ ರೂಪಾಯಿ ಮಗನಿಗೆ ನೀಡಿದರು. ಅದರಿಂದ ಸಿದ್ದಾರ್ಥ್ 3 ಲಕ್ಷ ರೂಪಾಯಿಗೆ 3 ಎಕರೆ ಭೂಮಿ ಖರೀದಿಸಿ ಉಳಿದ ಹಣವನ್ನು ಷೇರು ವ್ಯವಹಾರದಲ್ಲಿ ಹೂಡಿಕೆ ಮಾಡಿದರು. ಅದರಿಂದ ಸಿದ್ದಾರ್ಥ್ ಅವರಿಗೆ ಅಪಾರ ಲಾಭವೂ ಬಂತು.
ಇಂದು ಸಿದ್ದಾರ್ಥ್ ಹೆಸರಿನಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಕಾಫಿ ತೋಟವಿದೆ. ಮೂಡಿಗೆರೆಯ ಕುದ್ರೆಗುಂಡಿ ಎಸ್ಟೇಟ್, ಕೆಮ್ಮನಗುಂಡಿಯ ಹತ್ತಿರ ಲಾಲ್ ಬಾಗ್ ಎಸ್ಟೇಟ್, ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಹತ್ತಿರ ಕೆಲವು ಎಸ್ಟೇಟ್ ಗಳಿವೆ.
ಸಿದ್ದಾರ್ಥ್ ಅವರು ಸಾವಿರಾರು ಮಂದಿಗೆ ತಮ್ಮ ಕಾಫಿ ಬ್ರಾಂಡ್ ಔಟ್ ಲೆಟ್ ಗಳಲ್ಲಿ, ಕಾಫಿ ಎಸ್ಟೇಟ್ ನಲ್ಲಿ, ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಮತ್ತು ಎಬಿಸಿ ಕಂಪೆನಿಯಲ್ಲಿ ಕೆಲಸ ಕೊಟ್ಟಿದ್ದಾರೆ. ಇದರ ಹೊರತಾಗಿ ಮುಗ್ತಿಹಳ್ಳಿ ಸಮೀಪ ಅಂಬೆರ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್, ಮತ್ತಾವರ ಹತ್ತಿರ ಸೆರೈ ಹೊಟೇಲ್, ಕದ್ರಿಮಿದ್ರಿಯಲ್ಲಿ ಕಾಫಿ ಕ್ಯೂರಿಂಗ್ ಕೇಂದ್ರಗಳಿವೆ.
ಸಿದ್ದಾರ್ಥ್ ಅವರು ಕಷ್ಟವಿದೆ ಸಹಾಯ ಮಾಡಿ ಎಂದು ಕೇಳಿಕೊಂಡು ಬಂದವರನ್ನು ಯಾವತ್ತೂ ಬರಿಗೈಯಿಂದ ವಾಪಸ್ ಕಳುಹಿಸುತ್ತಿರಲಿಲ್ಲ ಎನ್ನುತ್ತಾರೆ ಚಿಕ್ಕಮಗಳೂರಿನ ಕಾಫಿ ಬೆಳೆಗಾರ ಸ್ಟಾನ್ನಿ ಡಿ ಸೋಜ. ಪ್ರತಿವರ್ಷ ತಮ್ಮ ಅಥವಾ ಬೇರೆ ಸ್ನೇಹಿತರ ಕಾಫಿ ತೋಟದ ಒರಟು ರಸ್ತೆಯಲ್ಲಿ ಕಾರು ಅಥವಾ ಬೈಕ್ ರ್ಯಾಲಿ ಏರ್ಪಡಿಸುತ್ತಿದ್ದರು ಎನ್ನುತ್ತಾರೆ.
ಇಂದು ತಮ್ಮ ಒಡೆಯ ಸಿದ್ದಾರ್ಥ್ ಹಠಾತ್ ಕಣ್ಮರೆಯಾಗಿದ್ದು ಅವರನ್ನು ನಂಬಿಕೊಂಡಿದ್ದ ಸಾವಿರಾರು ನೌಕರರಿಗೆ ದಿಕ್ಕೇ ತೋಚದಂತಾಗಿದೆ.ಕಣ್ಣೀರ ಕೋಡಿ ಹರಿಸುತ್ತಿದ್ದಾರೆ.
 ಉದ್ಯಮಿ ಸಿದ್ಧಾರ್ಥ ಅವರ ತಂದೆ ಕೋಮಾ ಸ್ಥಿತಿಯಲ್ಲಿದ್ದು, ಮೈಸೂರಿನ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಮಗನ ಸಾವಿನ ಸುದ್ದಿ ಇನ್ನೂ ಗೊತ್ತಾಗಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com