ಐಎಂಎ ವಂಚನೆ ಪ್ರಕರಣ: ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಜಮೀರ್ ಅಹಮದ್

ಐಎಂಎ ವಂಚನೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ಪ್ರದೇಶ ಕಾಂಗ್ರೆಸ್ ಕಚೇರಿಗೆ ಸಚಿವ ಜಮೀರ್...
ಜಮೀರ್ ಅಹಮ್ಮದ್ ಖಾನ್ -  ದಿನೇಶ್ ಗುಂಡೂರಾವ್
ಜಮೀರ್ ಅಹಮ್ಮದ್ ಖಾನ್ - ದಿನೇಶ್ ಗುಂಡೂರಾವ್
ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ಕೆಪಿಸಿಸಿ  ಅಧ್ಯಕ್ಷ  ದಿನೇಶ್ ಗುಂಡೂರಾವ್  ಶನಿವಾರ ಪ್ರದೇಶ ಕಾಂಗ್ರೆಸ್ ಕಚೇರಿಗೆ ಸಚಿವ ಜಮೀರ್ ಅಹಮ್ಮದ್ ಅವರನ್ನು ಕರೆಸಿಕೊಂಡು  ಪ್ರಕರಣದಲ್ಲಿ ತಮ್ಮ ಮೇಲೆ ಕೇಳಿಬಂದಿರುವ ಆರೋಪ ಹಾಗೂ ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಪಾತ್ರದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. 
ಪ್ರಕರಣದ ತನಿಖೆಯಲ್ಲಿ  ಪಕ್ಷಕ್ಕೆ ಮುಜುಗರ ಆಗುವ ಸಂಭವ ಇದ್ದರೆ, ಎಸ್‍ಐಟಿ ವಿಚಾರಣೆಗೂ ಮೊದಲೇ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ  ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರು ಸಚಿವ ಜಮೀರ್ ಅಹಮ್ಮದ್ ಹಾಗೂ ಮುಸ್ಲಿಂ  ಮುಖಂಡರ ಜೊತೆಗೆ ಕೆಪಿಸಿಸಿ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ರೋಷನ್ ಬೇಗ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೆ, ಮಾಜಿ ಸಚಿವ ಬೇಗ್ ನೋಟಿಸ್‍ಗೆ ಉತ್ತರಿಸಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಐಸಿಸಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರು, ಐಎಂಎ ಹಗರಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಪ್ರಕರಣದ ಕುರಿತು ಇದುವರೆಗೂ ನಡೆದ ತನಿಖೆಯ ಕುರಿತು ದಿನೇಶ್ ಗುಂಡೂರಾವ್ ಅವರಿಗೆ ಮಾಹಿತಿ ನೀಡಿದ್ದೇನೆ. ಇದರಲ್ಲಿ ರೋಷನ್ ಬೇಗ್ ಅವರ ಪಾತ್ರವಿದೆ ಎನ್ನುವುದಕ್ಕೆ ಸೂಕ್ತ ದಾಖಲೆಗಳು ಬೇಕು. ಧ್ವನಿ ಸುರಳಿಯಲ್ಲಿ ಮಾಜಿ ಸಚಿವರ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಧ್ವನಿ ಸುರುಳಿಯನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಮನ್ಸೂರ್ ಖಾನ್  ಧ್ವನಿ ಎನ್ನುವುದು ಸಾಬೀತಾದರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದು ಹೇಳಿದರು.
ಐಎಂಎ ಹಗರಣದ ಸಂಬಂಧ ಜಮೀರ್ ಅಹ್ಮದ್ ಖಾನ್ ಅವರನ್ನು ಬಂಧಿಸಬೇಕು ಎಂಬ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ  ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡಬಾರದು. ದಾಖಲೆಗಳು ಇದ್ದರೆ ಮಾತನಾಡಬೇಕು. ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ದಾಖಲೆ ಕೊಟ್ಟರೆ ಅವರು ಏನು  ಹೇಳುತ್ತಾರೆಯೋ ಅದನ್ನು ನಾನು ಕೇಳುತ್ತೇನೆ ಎಂದು ತಿರುಗೇಟು ನೀಡಿದರು.
ಸಚಿವ ಜಮೀರ್ ಅಹಮದ್ ಬಗ್ಗೆ ಸರ್ಕಾರ ಮೃದು ಧೋರಣೆ ತಾಳಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್‍ಐಟಿ ತನಿಖೆ ನಡೆಯುತ್ತಿದೆ. ನಾನೇನು ತನಿಖೆಯಲ್ಲಿ ಭಾಗವಹಿಸುವುದಿಲ್ಲಅಥವಾ ತನಿಖಾಧಿಕಾರಿಯೂ ಅಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ನಮ್ಮ ಅಧಿಕಾರಿಗಳ ಮೇಲೆ  ವಿಶ್ವಾಸವಿದೆ. ಒಂದು ವೇಳೆ ಪ್ರಕರಣವನ್ನು ಭೇದಿಸಲು ಎಸ್ಐಟಿಗೆ ಸಾಧ್ಯವಾಗದಿದ್ದರೆ ಮುಂದೆ ನೋಡೋಣ ಎಂದು ಹೇಳುವ  ಮೂಲಕ ಸಿಬಿಐ ತನಿಖೆ ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com