ಜಿಲ್ಲಾ ಉಸ್ತುವಾರಿ ಸಚಿವರೂ ಗ್ರಾಮ ವಾಸ್ತವ್ಯ ಆರಂಭಿಸಲಿದ್ದೇವೆ: ರಾಜಶೇಖರ ಪಾಟೀಲ್

ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಹಲವು ಗ್ರಾಮಗಳ ಅಭಿವೃದ್ಧಿಗೆ ಮುನ್ನುಡಿ...
ರಾಜಶೇಖರ ಪಾಟೀಲ್
ರಾಜಶೇಖರ ಪಾಟೀಲ್
ಯಾದಗಿರಿ: ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಹಲವು ಗ್ರಾಮಗಳ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಈಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜ್ಯದ ಗ್ರಾಮೀಣ ಜನರ ಕಷ್ಟಗಳನ್ನು ನೇರವಾಗಿ ಅರಿಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಚಂಡರಕಿ ಗ್ರಾಮದಿಂದ ಆರಂಭಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ದುರ್ಬಲ ವರ್ಗಗಳ, ಹಿಂದುಳಿದವರ,ಅಲ್ಪ ಸಂಖ್ಯಾತರ, ವಿಕಲಚೇತನರ ಹಾಗೂ ಮಹಿಳೆಯರ ಏಳಿಗೆಗೆ ಮೈತ್ರಿ ಸರ್ಕಾರ ವಿಶೇಷ ಗಮನ ನೀಡಿದೆ ಎಂದು ಗಣಿ,ಭೂವಿಜ್ಞಾನ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ್ ಅವರು ಹೇಳಿದರು.
ಇಂದು ಚಂಡರಕಿಯಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, 2018-19 ನೇ ಸಾಲಿನಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ಅನುಮೋದಿತವಾಗಿದ್ದ 178.52 ಕೋಟಿ ರೂ.ಗಳಲ್ಲಿ  153.77 ಕೋಟಿ ರೂಪಾಯಿ ವೆಚ್ಚ ಮಾಡಿ 810 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 462 ಕಾಮಗಾರಿಗಳು ಪೂರ್ಣಗೊಂಡಿವೆ. 2019-20ನೇ ಸಾಲಿನಲ್ಲಿ ಜಿಲ್ಲೆಗೆ 151 ಕೋಟಿ ರೂ.ಮಂಜೂರಾಗಿದೆ. ಮುಖ್ಯಮಂತ್ರಿಗಳ ಕಾರ್ಯದ ಮಾದರಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಗ್ರಾಮ ವಾಸ್ತವ್ಯ ಆರಂಭಿಸಲಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಚಂಡರಕಿ ಗ್ರಾಮದ ಹಲವಾರು ರೈತರಿಗೆ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರಗಳ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ,ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಶಾಸಕ ಶರಣಬಸಪ್ಪ ದರ್ಶನಾಪೂರ, ಎಸ್.ಎಲ್.ಭೋಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಹೆಚ್.ಕೋನರಡ್ಡಿ ಮತ್ತಿತರರು ಇದ್ದರು.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಹರ್ಷಗೊಂಡಿರುವ ಅವರ ಅಭಿಮಾನಿಗಳು ಇಂದು ಪಟಾಕಿ ಸಿಡಿಸಿ ಹಣ ವ್ಯಯ ಮಾಡುವ ಬದಲು, ಆ ಹಣದಲ್ಲಿ ಚಂಡ್ರಕಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗುಗಳನ್ನು ವಿತರಿಸಲು ಮುಂದಾದರು. ಸ್ವತಃ ಮುಖ್ಯಮಂತ್ರಿಗಳ ಮುಖಾಂತರ ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ವಿತರಿಸಿದ್ದು ವಿಶೇಷ ಹಾಗೂ ಮಾದರಿಯೆನಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com