ಸಂಧ್ಯಾ ಸುರಕ್ಷಾ ಯೋಜನೆಯಡಿ ಮುಂದಿನ ವರ್ಷದಿಂದ 2000 ರೂ. ಪಿಂಚಣಿ- ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಬರುವ ವರ್ಷದಿಂದ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ 2000 ರೂ,ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿಯನ್ನು 2500 ರೂ.ಗೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಭರವಸೆ ನೀಡಿದ್ದಾರೆ.
ಉಜಳಂಬ: ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಬರುವ ವರ್ಷದಿಂದ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ 2000 ರೂ,ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿಯನ್ನು 2500 ರೂ.ಗೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಭರವಸೆ ನೀಡಿದ್ದಾರೆ.
ಇಲ್ಲಿನ ಜನಸಂಪರ್ಕ ಸಭೆಯಲ್ಲಿ 32 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,ಎಲ್ಲಾ ಸಮುದಾಯದವರ ಆರ್ಥಿಕ ಹಾಗೂ ಶೈಕ್ಷಣಿಕ ಭದ್ರತೆಗೆ ಸರಕಾರ ಬದ್ಧವಾಗಿದೆ. ಸಾಮಾಜಿಕ ಸುರಕ್ಷಾ ಯೋಜನೆಗೆ ಸರ್ಕಾರ ಪ್ರಧಾನ ಆದ್ಯತೆ ನೀಡುತ್ತಿದೆ ಎಂದರು.
ಹೈದರಾಬಾದ್ ಕರ್ನಾಟಕದ ಎಲ್ಲಾ ಜಿಲ್ಲೆಗಳ ಶಾಲೆಗಳ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರತಿಯೊಂದು ಶಾಲೆಗಳ ಪರಿಸ್ಥಿತಿ, ಕಟ್ಟಡಗಳು, ಶಿಕ್ಷಕರ ಕೊರತೆ ಮತ್ತಿತರ ಎಲ್ಲಾ ಮಾಹಿತಿಗಳನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯದ ಎಲ್ಲಾ 30 ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದು, ನಮ್ಮ ಸರಕಾರ ಯಾವುದೇ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಮೈತ್ರಿ ಸರಕಾರ ಒಂದೆರಡು ಜಿಲ್ಲೆಗಳಿಗೆ ಮಾತ್ರ ಎಂದು ಕೆಲವರು ಅಸೂಯೆಯಿಂದ ಆರೋಪ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಯಾದಗಿರಿ ಮತ್ತು ರಾಯಚೂರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಸರ್ಕಾರದ ಬದ್ಧತೆಯನ್ನು ಇದು ತೋರಿಸುತ್ತದೆ ಎಂದರು.
ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕಾಗಿದ್ದು, ಸರ್ಕಾರದ ಸಬ್ಸಿಡಿ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಕೃಷಿ ಪದ್ಧತಿಯನ್ನು ಲಾಭದಾಯಕವನ್ನಾಗಿ ಪರಿವರ್ತಿಸಬೇಕು. ಕಾಯಕ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಐದು ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಶೇ. 4ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ ವಿವಿಧ ನೀರಾವರಿ ಕಾಮಗಾರಿ, ಸಣ್ಣ ನೀರಾವರಿ ಹಾಗೂ ಜಲಸಂಪನ್ಮೂಲ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ 800 ಕೋಟಿ ರೂ ಹಂಚಿಕೆ ಮಾಡಲಾಗಿದೆ. ಮಾಂಜ್ರಾ ಏತ ನೀರಾವರಿ ಮೂಲಕ 3ಟಿಎಂಸಿ ನೀರನ್ನು ಭಾಲ್ಕಿ ಹಾಗೂ ಬಸವಕಲ್ಯಾಣ ತಾಲೂಕಿನ ಕೆರೆಗಳನ್ನು ತುಂಬಿಸಲು 75 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಗೋದಾವರಿ ನದಿ ಪಾತ್ರದಿಂದ ಬೀದರ್ ಜಿಲ್ಲೆಗೆ 7.86 ಟಿಎಂಸಿ ನೀರು ಹಂಚಿಕೆಯಾಗುವ ಮಾಹಿತಿ ಇದ್ದು, ಈ ಕುರಿತು ನಿಖರವಾದ ಅಂಕಿ ಅಂಶಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೀದರ್ ವೈದ್ಯಕೀಯ ಕಾಲೇಜು ಕಟ್ಟಡ ಕಳಪೆ ಕಾಮಗಾರಿ ಕುರಿತು ಹಲವಾರು ದೂರುಗಳು ಬಂದಿದ್ದು, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸುಸಜ್ಜಿತ ಗೊಳಿಸಲು 150ರಿಂದ 200 ಕೋಟಿ ರೂ ಹಣ ನೀಡಲಾಗುವುದು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಘೋಷಿಸಲಾಗಿರುವ ಎಲ್ಲಾ ಕಾಮಗಾರಿಗಳಿಗೆ ಮುಂದಿನ ಐದು ತಿಂಗಳಲ್ಲಿ ಚಾಲನೆ ನೀಡಲಾಗುವುದು.ಎಂದರು.
ಸಾಲಮನ್ನಾ ಯೋಜನೆಯಡಿ ಕಳೆದ ಎರಡು ವರ್ಷಗಳಲ್ಲಿ ಬೀದರ್ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ 1,045 ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ 11785 ರೈತರ 43 ಕೋಟಿ ರೂ ಸಾಲಮನ್ನಾ ಆಗಿದೆ ಎಂದು ಕುಮಾರ ಸ್ವಾಮಿ ಹೇಳಿದರು.
ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಲೋಕೋಪಯೋಗಿ ಇಲಾಖೆಗೆ 317 ಕೋಟಿ ರೂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 89 ಕೋಟಿ ರೂ, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ 50 ಕೋಟಿ ರೂ ನೀಡಲಾಗಿದೆ ಎಂದರು.
ಇದಕ್ಕೂ ಮುನ್ನ ಕುಮಾರ ಸ್ವಾಮಿ ಬಸವಕಲ್ಯಾಣದಲ್ಲಿ ಬುಧವಾರ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ 6 ಜನರು ಮೃತಪಟ್ಟ ಮನೆಗೆ ಭೇಟಿ ನೀಡಿ ಪರಿಹಾರದ 24ಲಕ್ಷ ರೂ. ಚೆಕ್ ವಿತರಿಸಿ ಕುಟುಂಬದ ಅವಲಂಬಿತರಿಗೆ ಸಾಂತ್ವಾನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 100 ವರ್ಷಕ್ಕೂ ಹಳೆಯದಾದ ಇಂತಹ ನೂರಾರು ಮನೆಗಳು ಇರುವ ಬಗ್ಗೆ ಮಾಹಿತಿ ದೊರೆತಿದ್ದು ಅಂತಹ ಮನೆಗಳ ಸಮೀಕ್ಷೆಯನ್ನು ನಡೆಸಿ ವರದಿ ಸಲ್ಲಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದೇನೆ. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಬೀದರ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಬಸವಕಲ್ಯಾಣ ತಾಲೂಕಿನಲ್ಲಿ 2500 ಮನೆಗಳ ನಿರ್ಮಾಣಕ್ಕೆ ಆದೇಶಿಸಲಾಗಿದೆ ಎಂದರು.
ಸಚಿವರಾದ ಬಂಡೆಪ್ಪ ಕಾಶೆಂಪೂರ್, ರಾಜಶೇಖರ ಪಾಟೀಲ್, ರಹೀಂಖಾನ್, ಶಾಸಕ ಬಿ. ನಾರಾಯಣ ರಾವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.