ಅಟಲ್ ರಂತೆ ಮೋದಿ ಸೋಲಬಾರದು: ಆರ್.ಅಶೋಕ್
ರಾಜ್ಯ
ಅಟಲ್ ರಂತೆ ಮೋದಿ ಸೋಲಬಾರದು: ಆರ್.ಅಶೋಕ್
ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ವಿಫಲರಾದ ಕಾರಣ ವಾಜಪೇಯಿ ಸೋಲಬೇಕಾಯಿತು. ಆ ಸ್ಥಿತಿ ಮತ್ತೊಮ್ಮೆ ಮರುಕಳಿಸಬಾರದು.
ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ವಿಫಲರಾದ ಕಾರಣ ವಾಜಪೇಯಿ ಸೋಲಬೇಕಾಯಿತು. ಆ ಸ್ಥಿತಿ ಮತ್ತೊಮ್ಮೆ ಮರುಕಳಿಸಬಾರದು. ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಸಮರ್ಥವಾಗಿ ತಲುಪಿಸಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾದರೆ ಬಿಜೆಪಿ ಮಾದ್ಯಮ ವಿಭಾಗ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ರಾಜ್ಯ ಚುನಾವಣಾ ಸಂಚಾಲಕ ಆರ್.ಅಶೋಕ್ ಸೂಚನೆ ನೀಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮಾಧ್ಯಮ ವಿಭಾಗದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುವರ್ಣ ಚತುಷ್ಪಥ ಹೆದ್ದಾರಿ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅಟಲ್ ಬಿಹಾರಿ ವಾಜಪೇಯಿ ಕೈಗೊಂಡಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸಿದರು.ಆದರೆ ಅವರ ಅಭಿವೃದ್ದಿ ಕಾರ್ಯಗಳು ಜನರಿಗೆ ಸರಿಯಾಗಿ ತಲುಪಲೇ ಇಲ್ಲ. ಹಾಗಾಗಿ ಅವರು ಸೋಲನ್ನು ಅನುಭವಿಸಬೇಕಾಯ್ತು. ಆದರೆ ಈಗ ಅಂತಹ ಸನ್ನಿವೇಶ ಮರುಕಳಿಸಬಾರದು ಹಾಗಾಗಿ ಮೋದಿ ಸರ್ಕಾರದ ಸಾಧನೆಯನ್ನು ಜನರಿಗೆ ಸಮರ್ಥವಾಗಿ ತಲುಪಿಸಬೇಕು ಎಂದು ತಿಳಿಸಿದರು.
ನಮ್ಮ ನಾಯಕ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ನಿಗದಿಯಾಗಿದೆ. ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು? ರಾಹುಲ್ ಗಾಂಧಿಯಾ, ಚಂದ್ರಬಾಬು ನಾಯ್ಡು, ಮಾಯಾವತಿ, ಮಮತಾ ಬ್ಯಾನರ್ಜಿ ಅವರಾ, ಇದೇ ತಮ್ಮ ಕೊನೆಯ ಚುನಾವಣೆ ಎಂದು ಕಳೆದ 20 ವರ್ಷಗಳಿಂದ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿರುವ ದೇವೇಗೌಡರಾ? ಯಾರು ಅವರ ಪ್ರಧಾನಿ ಅಭ್ಯರ್ಥಿ. ಜತೆಗೆ ಕೇಂದ್ರದಲ್ಲಿ ಮತ್ತೆ ಕಿಚಡಿ ಸರ್ಕಾರ ಬೇಕಾ ಅಥವಾ ಸುಸ್ಥಿರ ಸರ್ಕಾರ ಬೇಕಾ ಎಂಬುದನ್ನು ಜನರ ಮುಂದಿಡುವ ಕೆಲಸವನ್ನು ನಮ್ಮ ಪಕ್ಷದ ಮಾದ್ಯಮ ವಿಭಾಗ ಸಮರ್ಥವಾಗಿ ನಿರ್ವಹಿಸಬೇಕು ಎಂದರು.
ಶರದ್ ಪವಾರ್ ಅವರು ಕುಟುಂಬ ರಾಜಕಾರಣ ಮಾಡಲು ಹಿಂದೇಟು ಹಾಕಿದರು. ಇಂತಹಾ ಆಲೋಚನೆ ದೇವೇಗೌಡರಿಗೆ ಬರಲೇ ಇಲ್ಲ. ಕೋಲ್ಗೇಟ್, ಹಾರ್ಪಿಕ್ ಅಂತೆಲ್ಲಾ ಬ್ರಾಂಡ್ ಇರುವಂತೆ ದೇವೇಗೌಡರ ಕುಟುಂಬಕ್ಕೆ ಕಣ್ಣೀರಿಗೆ ಬ್ರಾಂಡ್ ಆಗಿದೆ. ತಮ್ಮ ಮಕ್ಕಳು, ಮೊಮ್ಮಕ್ಕಳ ವಿಷಯಕ್ಕೆ ಮಾತ್ರ ಕಣ್ಣೀರು ಹರಿಸುವ ದೇವೇಗೌಡರು ಮತ್ತು ಕುಟುಂಬ ವರ್ಗದವರು, ಬೇರೆಯವರ ಸಂಕಷ್ಟದಲ್ಲಿ, ನೋವಿನಲ್ಲಿದ್ದಾಗ ಏಕೆ ಅಳಲಿಲ್ಲ ಎಂದು ಕುಟುಂಬ ರಾಜಕಾರಣವನ್ನು ಅಶೋಕ್ ಟೀಕಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ