ಬಿಜೆಪಿ ಕೇಂದ್ರ ನಾಯಕರಿಗೆ ಬಿಎಸ್ ವೈ ಕಪ್ಪ, ಮಾಹಿತಿಯುಳ್ಳ ಡೈರಿ ನಕಲಿ: ಐಟಿ ಇಲಾಖೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಪಕ್ಷದ ಕೇಂದ್ರ ನಾಯಕರುಗಳಿಗೆ ಹಣ ಸಂದಾಯ ಮಾಡಿದ್ದಾರೆ ಎಂಬ ಮಾಹಿತಿಯುಳ್ಳ ಡೈರಿ ನಕಲಿ ಎಂದು ಆದಾಯ...
ಬಿಎಸ್ ಯಡಿಯೂರಪ್ಪ, ಬಿಜೆಪಿ ನಾಯಕರು
ಬಿಎಸ್ ಯಡಿಯೂರಪ್ಪ, ಬಿಜೆಪಿ ನಾಯಕರು
Updated on
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಪಕ್ಷದ ಕೇಂದ್ರ ನಾಯಕರುಗಳಿಗೆ ಹಣ ಸಂದಾಯ ಮಾಡಿದ್ದಾರೆ ಎಂಬ ಮಾಹಿತಿಯುಳ್ಳ ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆಯ ಶನಿವಾರ ಸ್ಪಷ್ಟಪಡಿಸಿದೆ.
ನಿಯತ ಕಾಲಿಕೆಯೊಂದರಲ್ಲಿ ಪ್ರಕಟವಾಗಿದ್ದ ಡೈರಿ ವಿವರಗಳು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಡೈರಿ ವಿವಾದದ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ ಶುಕ್ರವಾರ ಸ್ಪಷ್ಟೀಕರ ನೀಡಿದ ಬೆನ್ನಲ್ಲೇ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಾಯ ತೆರಿಗೆ ಇಲಾಖೆ ಕರ್ನಾಟಕ - ಗೋವಾ[ತನಿಖೆ] ವಿಭಾಗದ ಮಹಾ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ಅವರು, ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಡೈರಿ ನಕಲಿ ಎಂಬ ತೀರ್ಮಾನಕ್ಕೆ ಆದಾಯ ತೆರಿಗೆ ಇಲಾಖೆ ಬಂದಿದೆ ಎಂದರು. 
ಡೈರಿಯಲ್ಲಿದ್ದ ಯಡಿಯೂರಪ್ಪ ಅವರ ಕೈ ಬರಹವನ್ನು ಹೈದರಾಬಾದ್ ನ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಮೂಲ ದಾಖಲೆಗಳಿಲ್ಲದೇ ಇದು ಯಾರ ಕೈ ಬರಹ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ ವಾಪಸ್ ಕಳುಹಿಸಿದೆ.  ಅಂತಿಮವಾಗಿ ಇದು ನಕಲಿ ಡೈರಿ ಎನ್ನುವ ತೀರ್ಮಾನಕ್ಕೆ ಆದಾಯ ತೆರಿಗೆ ಇಲಾಖೆ ಬಂದಿದೆ ಎಂದರು.  
ಇದು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಡೈರಿಯಲ್ಲ. ಇದನ್ನು ನಕಲು ಮಾಡಲಾಗಿದ್ದು, ಇಂತಹ ದಾಖಲೆಗಳ ಮೂಲಕ ತಮ್ಮ ಎದುರಾಳಿಗಳ ಮೇಲೆ ತನಿಖೆ ನಡೆಸಲಿ ಎಂದು ಇಲಾಖೆ ಮೇಲೆ ಪ್ರಭಾವ ಬೀರುವ ಪ್ರಯತ್ನವೂ ಸಹ ಇದರ ಹಿಂದೆ ಅಡಗಿರಬಹುದು. ಆದರೆ ನಾವು ಇಂತಹ ಯತ್ನಗಳಿಗೆ ಅವಕಾಶ ನೀಡಿಲ್ಲ  ಎಂದು ಸ್ಪಷ್ಟಪಡಿಸಿದರು. 
ನಕಲಿ ದಾಖಲೆಗಳನ್ನು ಮುಂದಿಟ್ಟುಕೊಂಡು ವರದಿ ಮಾಡಿದ ಮಾಧ್ಯಮ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಡೈರಿಯಲ್ಲಿ ನಮೂದಿಸಿರುವುದು ಸಾಕ್ಷಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಹೀಗಾಗಿ ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಉದ್ಭವಿಸದು ಎಂದು ಬಾಲಕೃಷ್ಣನ್ ಸ್ಪಷ್ಪಪಡಿಸಿದರು. 
ಈ ಡೈರಿಯ ಪುಟ, ಸಚಿವ ಡಿ.ಕೆ.ಶಿವಕುಮಾರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಸಿಕ್ಕಿತ್ತು. ಅದು ಯಡಿಯೂರಪ್ಪನವರಿಗೆ ಸೇರಿದ್ದು ಎಂದು ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಆದರೆ ಅದೊಂದು ಝೆರಾಕ್ಸ್‌ ಪ್ರತಿಯಾಗಿದ್ದು, ಅದರ ಮೂಲ ಪ್ರತಿ ಇಲಾಖೆಗೆ ದೊರೆತಿಲ್ಲ.  
‘ಬಿ.ಎಸ್‌.ಯಡಿಯೂರಪ್ಪ 1800 ಕೋಟಿ ರೂ. ಹಣವನ್ನು ಅಂದಿನ ಬಿಜೆಪಿ ಕೇಂದ್ರ ನಾಯಕರುಗಳಿಗೆ, ಕೇಂದ್ರ ಸಮಿತಿಗೆ ಮತ್ತು ನ್ಯಾಯಮೂರ್ತಿಗಳು, ನ್ಯಾಯವಾದಿಗಳಿಗೆ ಸಂದಾಯ ಮಾಡಿದ್ದಾರೆ’ ಎಂದು ನಿಯತಕಾಲಿಕೆಯೊಂದು ವರದಿ ಮಾಡಿತ್ತು. ಅದು 2009ರ ಶಾಸಕರ ಡೈರಿ ಪುಟವಾಗಿದ್ದು, ಕೆಲವು ವೈಯಕ್ತಿಕ ಹೆಸರುಗಳು ಸೇರಿದಂತೆ ಅಂಕಿ-ಸಂಖ್ಯೆಗಳನ್ನು ಹೊಂದಿತ್ತು. ಅದರ ಮೂಲ ಪ್ರತಿ ಲಭಿಸಿಲ್ಲ. ಅಲ್ಲದೇ ಹಣ ವರ್ಗಾವಣೆ ಮಾಡಿದ ಅವಧಿಯನ್ನು ಸಹ ಡಿ.ಕೆ. ಶಿವಕುಮಾರ್ ಆದಾಯ ತೆರಿಗೆ ಇಲಾಖೆಗೆ ತಿಳಿಸಿಲ್ಲ. ಆದರೆ ಡೈರಿ ಮಾಹಿತಿ ರಾಜಕೀಯವಾಗಿ ಆರೋಪ - ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com