ಅಕ್ರಮ ಕಟ್ಟಡಗಳಿಗೆ ಅನುಮತಿ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ತರಾಟೆ

ನಗರದ ಕೃಷ್ಣ ರಾಜೇಂದ್ರ ಮಾರುಕಟ್ಟೆ(ಕೆ.ಆರ್. ಮಾರ್ಕೆಟ್) ಸಂಕೀರ್ಣದಲ್ಲಿ ನಿಯಮಬಾಹಿರ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿ ಆಯುಕ್ತರನ್ನು...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ನಗರದ ಕೃಷ್ಣ ರಾಜೇಂದ್ರ ಮಾರುಕಟ್ಟೆ(ಕೆ.ಆರ್. ಮಾರ್ಕೆಟ್) ಸಂಕೀರ್ಣದಲ್ಲಿ ನಿಯಮಬಾಹಿರ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಧಾರವಾಡದಲ್ಲಿ ಇತ್ತೀಚೆಗೆ  ಸಂಭವಿಸಿದ ಕಟ್ಟಡ ಕುಸಿತದಂತಹ ಅವಘಡಗಳೇನಾದರೂ ನಡೆದಲ್ಲಿ, ಆಯುಕ್ತರು ಮತ್ತಿತರರ ಅಧಿಕಾರಿಗಳನ್ನು ಪ್ರಮುಖ ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ  ನೀಡಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ವಿಚಾರಣೆಗೆ ಹಾಜರಾಗಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಮಾರುಕಟ್ಟೆಯ ಕಟ್ಟಡಗಳಿಗೆ ಅಗ್ನಿ ಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಮಾ.6ರಂದು ಟೆಂಡರ್ ಕರೆಯಲಾಗಿದೆಯಾದರೂ, ಚುನಾವಣಾ ನೀತಿ ಸಂಹಿತೆ ಕಾರಣ ಅದನ್ನು ಮುಂದುವರಿಸಿಲ್ಲ  ಎಂದು ವಿವರಿಸಿದರು.
ಇದರಿಂದ ಸಮಾಧಾನಗೊಳ್ಳದ ಹಂಗಾಮಿ ಮುಖ್ಯ  ನ್ಯಾಯಮೂರ್ತಿ ಎಲ್‍.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್‍.ದಿನೇಶ್‍ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಎಲ್ಲ ಕಟ್ಟಡಗಳಿಗೆ ನಿರಾಕ್ಷೇಪಣಾ ಪತ್ರ ಪಡೆದ ನಂತರವಷ್ಟೇ ಅವುಗಳು ಕಾರ್ಯನಿರ್ವಹಿಸಲು ಅನುಮತಿ ದೊರೆಯುತ್ತದೆ. ಅಲ್ಲಿಯವರೆಗೆ ಅದನ್ನು ಸ್ಥಗಿತಗೊಳಿಸಿ ಎಂದು ಮೌಖಿಕವಾಗಿ ಸೂಚಿಸಿತು.
ಇದು ನಿಮ್ಮ ಜೀವನದ ಪ್ರಶ್ನೆಯಲ್ಲವಲ್ಲ, ಬೇರೆಯವರ ಬದುಕಿನ ಪ್ರಶ್ನೆಯಾದ್ದರಿಂದ ಅತೀವ ಅಲಕ್ಷ್ಯ ತೋರುತ್ತಿದ್ದೀರಿ ಎಂದು ಕಿಡಿಕಾರಿತು. ಜೊತೆಗೆ, ತಕ್ಷಣ ಎಲ್ಲ ಕಟ್ಟಡಗಳಿಗೆ ಅಗ್ನಿ ಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದು, ಒಂದು ವಾರದಲ್ಲಿ ಪ್ರಗತಿ ವರದಿ ಸಲ್ಲಿಸಿ ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಮುಂದೂಡಿತು. 
ಈ ಆದೇಶ ಕೇವಲ ಕೆ.ಆರ್.ಮಾರುಕಟ್ಟೆಗೆ ಸೀಮಿತವಾಗಿರದೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಮಾರುಕಟ್ಟೆಗಳಿಗೆ ಅನ್ವಯಿಸುತ್ತದೆ. ಮಾರುಕಟ್ಟೆಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಷಿ ನಿರ್ಮಿಸಿರುವ ಎಲ್ಲ ಕಟ್ಟಡಗಳು, ಅಂಗಡಿ ಮುಗ್ಗಟ್ಟುಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಜನರು ಹಾಗೂ ಅಗ್ನಿ ಶಾಮಕ ದಳದ ಸಂಚಾರಕ್ಕೆ ಅಡ್ಡಿಮಾಡುವ ಕಟ್ಟಡಗಳನ್ನು ಕೂಡ ತೆರವು ಮಾಡಬೇಕು. ಎರಡು  ವಾರಗಳಲ್ಲಿ ಈ ಆದೇಶ ಪಾಲನೆಯಾಗಬೇಕು ಎಂದು ನ್ಯಾಯಪೀಠ ಸ್ಪಷ್ಟ ಆದೇಶ ನೀಡಿತು.
ಬಿಬಿಎಂಪಿ ಅಧಿಕಾರಿಗಳು ಅನಧಿಕೃತ ಕಟ್ಟಡಗಳ ತೆರವು ಹಾಗೂ ನಿರಕ್ಷೇಪಣಾ ಪತ್ರ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಹಾಗೂ  ಸಮಾಧಾನಕರ ಫಲಿತಾಂಶ ದೊರೆಯದಿದ್ದಲ್ಲಿ ನ್ಯಾಯಾಲಯದ ಗಮನಕ್ಕೆ ತರುವಂತೆ ವಿಚಾರಣೆ  ಸಂದರ್ಭದಲ್ಲಿ ಹಾಜರಿದ್ದ ಅಗ್ನಿ ಶಾಮಕ ದಳದ ಮುಖ್ಯಸ್ಥರಿಗೆ ನ್ಯಾಯಪೀಠ ಸೂಚನೆ ನೀಡಿತು. 
ಪ್ರಕರಣವೇನು?
ಕೆ.ಆರ್.ಮಾರುಕಟ್ಟೆಯಲ್ಲಿ  ನಿಯಮಬಾಹಿರವಾಗಿ ಹಲವು ಕಟ್ಟಡಗಳು ತಲೆಎತ್ತಿದ್ದು, ಅಗ್ನಿ ಅವಘಡದಂತಹ ದುರಂತಗಳು ಸಂಭವಿಸಿದಲ್ಲಿ, ಜನರಿಗೆ ನಿರ್ಗಮಿಸಲು ಹಾಗೂ ಅಗ್ನಿ ಶಾಮಕ ದಳದ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಮಾರುಕಟ್ಟೆ ಸಂರ್ಕೀಣದ ಸಾರ್ವಜನಿಕ ಪಡಸಾಲೆ ಮತ್ತು ತುರ್ತು ನಿರ್ಗಮನ ಜಾಗಗಲ್ಲಿ ತಳಮಹಡಿಯ ನಂತರದ ಅಂತಸ್ತಿನಲ್ಲಿ 24 ಹಾಗೂ ಮೊದಲ  ಅಂತಸ್ತಿನಲ್ಲಿ 53 ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಯಾವುದೇ ಸುರಕ್ಷತಾ  ಕ್ರಮಗಳನ್ನು  ಕೈಗೊಳ್ಳಲಾಗಿಲ್ಲ. ಈವರೆಗೂ ಅಲ್ಲಿ 95ಕ್ಕೂ ಅಧಿಕ ಅಗ್ನಿ ಅವಘಡಗಳು  ಸಂಭವಿಸಿವೆ.  ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿರುವಾಗಲೇ 53 ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳ ತೆರವಿಗೆ ಹಾಗೂ ಅಸ್ತಿತ್ವದಲ್ಲಿರುವ ಕಟ್ಟಡಗಳು ಅಗ್ನಿ ಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 
ನಿನ್ನೆ ಬಿಬಿಎಂಪಿ  ಪರ ವಕೀಲರು , ಅಕ್ರಮವಾಗಿ ನಿರ್ಮಿಸಲಾದ 24 ಮಳಿಗೆಗಳನ್ನು ತೆರವುಗೊಳಿಸಲು  ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಅಗ್ನಿಶಾಮಕ ಇಲಾಖೆಯ  ವರದಿಯನ್ನು  ನ್ಯಾಯಪೀಠಕ್ಕೆ ಸಲ್ಲಿಸಿದ ಸರ್ಕಾರದ ಪರ ವಕೀಲರು, ಸ್ಥಳ ಪರೀಶಿಲನೆ ನಡೆಸಿದ  ಅಧಿಕಾರಿಗಳ ತಂಡ ಕೆಲವೊಂದು ಲೋಪಗಳನ್ನು ಗುರುತಿಸಿ 2018ರ ಫೆ.10ರಂದು 19 ಅಂಶಗಳ ವರದಿ ನೀಡಿದೆ ಎಂದು ಮಾಹಿತಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com