ಮೇ 29ಕ್ಕೆ ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದ ಚುನಾವಣೆ, ಮೇ 31ಕ್ಕೆ ಫಲಿತಾಂಶ

ಎರಡನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಮೇ 29 ರಂದು ಒಟ್ಟು 103 ನಗರ ಸ್ಥಳೀಯ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಎರಡನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಮೇ 29 ರಂದು ಒಟ್ಟು 103 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಗುರುವಾರದಿಂದಲೇ ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ತಿಳಿಸಿದ್ದಾರೆ.
ಸರ್ಕಾರ ಹೊರಡಿಸಿರುವ ಕ್ಷೇತ್ರ ವಿಂಗಡನೆ ಮತ್ತು ವಾರ್ಡ್‍ವಾರು ಮೀಸಲಾತಿ ಅಧಿಸೂಚನೆ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ 39 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಗಳು ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವುದರಿಂದ ಕುಂದಗೋಳ ಪಟ್ಟಣ ಪಂಚಾಯಿತಿಯನ್ನು ಹೊರತುಪಡಿಸಿ ಉಳಿದ 63 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ಮೇ 9ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮೇ 17 ಉಮೇದುವಾರಿಕೆ ಪರಿಶೀಲನೆ, 20ಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. 
ಮೇ 29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮರು ಮತದಾನ ಅವಶ್ಯಕತೆಯಿದ್ದಲ್ಲಿ ಅದನ್ನು ಮೇ 30 ರಂದು ನಡೆಸಲಿದ್ದು, 31ಕ್ಕೆ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಫಲಿತಾಂಶ ಪ್ರಕಟವಾಗುವ ದಿನದಂದೇ ಚುನಾವಣೆ ಪ್ರಕ್ರಿಯೆ ಮುಗಿಯಲಿದೆ.
ಸರ್ಕಾರದ ಅಧಿಸೂಚನೆ 2011ರನ್ವಯ ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯ ಚುನಾವಣಾ ವೆಚ್ಚದ ಗರಿಷ್ಠ ಮಿತಿ 2 ಲಕ್ಷ, ಪುರಸಭೆಗೆ 1.50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿರುತ್ತದೆ.
ಈಗಾಗಲೇ ಆಗಸ್ಟ್ 2018 ರಲ್ಲಿ ಮೊದಲ ಹಂತದ 109 ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆದಿದೆ.
ಚುನಾವಣೆಗೆ ಅಗತ್ಯವಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಆಯೋಗ ಮಾಡಿಕೊಂಡಿರುವುದಾಗಿ ಶ‍್ರೀನಿವಾಸಾಚಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗ್ರಾಮ ಪಂಚಾಯಿತಿಗಳಲ್ಲಿ ಎಂದಿನಂತೆ ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದ್ದು, ಇನ್ನುಳಿದ ಸ್ಥಳೀಯ ಸಂಸ್ಥೆಗಳಿಗೆ ಇವಿಎಂ, ನೋಟಾ ಅಳವಡಿಸಲಾಗಿದೆ. ವಿವಿಪ್ಯಾಟ್‍ಗಳಿಗೆ ಬೇಡಿಕೆ ಇಟ್ಟಿದ್ದರೂ ಸಹ ಅದನ್ನು ತಕ್ಷಣವೇ ಪೂರೈಸಲು ಬಿಇಎಲ್ ಸಿದ್ಧವಿಲ್ಲದ ಕಾರಣ ವಿವಿಪ್ಯಾಟ್ ಅಳವಡಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ರಾಜ್ಯ ಪೊಲೀಸ್ ಇಲಾಖೆಯ ಸಹಕಾರ ಕೋರಲಾಗಿದೆ. ಐಎಎಸ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ, ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ಹಾಗೂ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಜಂಟಿ ನಿಯಂತ್ರಕರು ಮತ್ತು ಉಪನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತಿದೆ. 
ಸದಸ್ಯರ ನಿಧನದಿಂದ ತೆರವಾಗಿರುವ ಬಿಬಿಎಂಪಿ ವಾರ್ಡ್ 60-ಸಗಾಯಿಪುರ, 103-ಕಾವೇರಿಪುರ, ತುಮಕೂರು ಮಹಾನಗರ ಪಾಲಿಕೆ ವಾರ್ಡ್-22 , ಸದಲಗ ಪುರಸಭೆ ವಾರ್ಡ್ 19, ಮುಗಳಖೋಡ ಪುರಸಭೆ ವಾರ್ಡ್ 2 ಹಾಗೂ ಸದಸ್ಯರ ರಾಜೀನಾಮೆಯಿಂದ ತೆರವಾಗಿರುವ ಹೆಬ್ಬಗೋಡಿ ಪುರಸಭೆ ವಾರ್ಡ್ 26 ಗೂ ಇದೇ ದಿನಾಂಕದಂದು ಉಪಚುನಾವಣೆ ನಡೆಯಲಿದೆ.
ಒಟ್ಟು 63 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 8 ನಗರಸಭೆಗಳ 248 ವಾರ್ಡ್‍ಗಳಿಗೆ, 33 ಪುರಸಭೆಗಳ 783 ವಾರ್ಡ್‍ಗಳಿಗೆ ಹಾಗೂ 22 ಪಟ್ಟಣಪಂಚಾಯಿತಿಗಳ 330 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ.
ರಾಮನಗರ, ಕೊಡಗು, ಬೆಳಗಾವಿ, ಕಲಬುರಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಎರಡನೇ ಹಂತದ ಚುನಾವಣೆ ನಡೆಸುತ್ತಿಲ್ಲ.
63 ನಗರ ಸ್ಥಳೀಯ ಸ್ಥಳೀಯ ಸಂಸ್ಥೆಗಳಲ್ಲಿ  7,37,006 ಪುರುಷ , 7,36,899 ಮಹಿಳಾ , ಇತರೆ 181 ಸೇರಿದಂತೆ ಒಟ್ಟು 14,74,086 ಮತದಾರರಿದ್ದು, ಒಟ್ಟು 1,646 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 8,230 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಒಟ್ಟು 1,998 ಬ್ಯಾಲೆಟ್ ಯೂನಿಟ್‍ಗಳನ್ನು ಹಾಗೂ 1,998 ಕಂಟ್ರೋಲ್ ಯೂನಿಟ್‍ಗಳನ್ನು ಸಿದ್ಧಗೊಳಿಸಲಾಗಿರುತ್ತದೆ.
ಆಸ್ತಿ ಮತ್ತು ಹೊಣೆಗಾರಿಕೆ ಘೋಷಿಸದ 25 ಸದಸ್ಯರ ಹಾಗೂ ಆಸ್ತಿ ಮತ್ತು ಹೊಣೆಗಾರಿಕೆ ಘೋಷಣೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಒಬ್ಬ ಸದಸ್ಯರ ಸದಸ್ಯತ್ವವನ್ನು ಆಯೋಗ ರದ್ದುಗೊಳಿಸಿದೆ.
2016 ನೇ ಸಾಲಿನಲ್ಲಿ ದಾವಣಗೆರೆ 1, ಚಿಕ್ಕಮಗಳೂರು 1, ಬೆಳಗಾವಿ1, ಧಾರವಾಡ 1, 2016-17 ರಲ್ಲಿ ಬೆಂಗಳೂರು ನಗರ 2, ತುಮಕೂರು 1, ಕೊಡಗು 3, ಹಾಸನ 1 ಹಾಗೂ 2017-18 ನೇ ಸಾಲಿನಲ್ಲಿ ದಾವಣಗೆರೆ 1, ಚಿಕ್ಕಮಗಳೂರು 2, ದ.ಕನ್ನಡ 3,ಉಡುಪಿ 1, ಮಂಡ್ಯ1, ಬಾಲಕೋಟೆ 1 ಉ.ಕನ್ನಡ 1 ರಾಯಚೂರು 1, ಚಾಮರಾಜನಗರ 1 ಸದಸ್ಯರು ಆಸ್ತಿ ಹೊಣೆಗಾರಿಕೆ ಘೋಷಿಸಿಲ್ಲ. ಬೆಂಗಳೂರು ಗ್ರಾಮಾಂತರ ಗ್ರಾ.ಪಂಚಾಯಿತಿ ಸದಸ್ಯರೊಬ್ಬರು ಸುಳ್ಳು ಮಾಹಿತಿ ನೀಡಿದ್ದು ಸಾಬೀತಾಗಿದ್ದರಿಂದ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com