ಶಾಲಾ ಬ್ಯಾಗ್ ಹೊರೆ ಇಳಿಸಲು ಸರ್ಕಾರದ ಕ್ರಮ: ಯಾವ ತರಗತಿ ಮಕ್ಕಳಿಗೆ ಎಷ್ಟು ತೂಕದ ಬ್ಯಾಗ್, ಇಲ್ಲಿದೆ ಮಾಹಿತಿ

ಶಾಲಾ ಮಕ್ಕಳ ಬ್ಯಾಗ್ ಗಳ ಭಾರ ಮಿತಿಯಲ್ಲಿರಬೇಕು. ಮಕ್ಕಳಿಗೆ ಬ್ಯಾಗ್ ಹೊರೆಯಾಗಬಾರದು ಎಂಬ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಗಳ ಭಾರ ಮಿತಿಯಲ್ಲಿರಬೇಕು. ಮಕ್ಕಳಿಗೆ ಬ್ಯಾಗ್ ಹೊರೆಯಾಗಬಾರದು ಎಂಬ ಮಾತು ಹಲವು ವರ್ಷಗಳ ಹಿಂದಿನಿಂದಲೂ ಕೇಳಿಬರುತ್ತಿದೆ. ಇದೀಗ ಕರ್ನಾಟಕ ಸರ್ಕಾರವೇ ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತಂದಿದೆ.
ಇನ್ನು ಮುಂದೆ ಶಾಲಾ ಮಕ್ಕಳ ದೇಹದ ತೂಕಕ್ಕಿಂತ ಸರಾಸರಿ  ಶೇಕಡಾ 10ಕ್ಕಿಂತ ಹೆಚ್ಚು ಅವರ ಶಾಲೆಯ ಬ್ಯಾಗ್ ಇರಬಾರದು ಎಂದು ಸರ್ಕಾರ ನಿಯಮ ರೂಪಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಶಾಲಾ ಮಕ್ಕಳ ಬ್ಯಾಗುಗಳ ತೂಕ ಎಷ್ಟಿರಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳ ಶಾಲಾ ಬ್ಯಾಗುಗಳು ಒಂದೂವರೆ ಕೆ ಜಿಯಿಂದ ಎರಡು ಕೆಜಿ, ಮೂರು, ನಾಲ್ಕು ಮತ್ತು ಐದನೇ ತರಗತಿ ಮಕ್ಕಳ ಬ್ಯಾಗುಗಳು 2ರಿಂದ 3ಕೆಜಿ ತೂಕ ಹೊಂದಿರಬೇಕು.
6ರಿಂದ ಒಂಭತ್ತನೇ ತರಗತಿ ಓದುತ್ತಿರುವ ಮಕ್ಕಳ ಬ್ಯಾಗ್ ಗಳು 3ರಿಂದ 4 ಕೆಜಿ ಹಾಗೂ 9 ಮತ್ತು 10ನೇ ತರಗತಿ ಓದುತ್ತಿರುವ ಮಕ್ಕಳ ಶಾಲಾ ಬ್ಯಾಗುಗಳು 5 ಕೆಜಿ ತೂಕವನ್ನು ಹೊಂದಿರಬೇಕು ಎಂದು ಶಿಕ್ಷಣ ಇಲಾಖೆ ಶಾಲೆಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದು ಈ ನಿಯಮ ಕಡ್ಡಾಯವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬೇಕೆಂದು ಆದೇಶ ಹೊರಡಿಸಲಾಗಿದೆ.
2016-17ನೇ ಸಾಲಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಮಕ್ಕಳು, ಕಾನೂನು ಮತ್ತು ರಾಷ್ಟ್ರೀಯ ಕಾನೂನು ಶಾಲೆ ಕೇಂದ್ರದ ಸಹಯೋಗದಲ್ಲಿ ನಡೆಸಿದ ಅಧ್ಯಯನದ ಬಳಿಕ ಶಿಕ್ಷಣ ಇಲಾಖೆ ಈ ನಿಯಮ ಹೊರಡಿಸಿದೆ. ನಿಯಮ ಕಡ್ಡಾಯವಾಗಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಜಾರಿಗೆ ತರಬೇಕೆಂದು ಹೇಳಲಾಗಿದ್ದು ಈ ಸಂಬಂಧ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ.
ಬ್ಯಾಗ್ ರಹಿತ ದಿನ: ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಂವರ್ಕ್ ನೀಡಬಾರದು ಎಂದು ಸೂಚಿಸಲಾಗಿದೆ. ಅಲ್ಲದೆ ಅವರ ನೋಟ್ ಪುಸ್ತಕಗಳು 100 ಪುಟಕ್ಕಿಂತ ಹೆಚ್ಚು ಇರಬಾರದು. ತಿಂಗಳಲ್ಲಿ ಪ್ರತಿ ಮೂರನೇ ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಬೇಕು. ಆ ದಿನದಂದು ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳು ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕೆಂದು ಕೂಡ ನಿರ್ದೇಶನ ನೀಡಲಾಗಿದೆ.
ಮಕ್ಕಳು ಶಾಲೆಗಳಿಗೆ ಬರುವಾಗ ಅಗತ್ಯವಿರುವಷ್ಟೇ ಪುಸ್ತಕಗಳನ್ನು ತರಬೇಕು, ಬ್ಯಾಗುಗಳ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಶಿಕ್ಷಕರು ಮರುದಿನ ಶಾಲೆಗೆ ಬರುವಾಗ ಯಾವೆಲ್ಲ ಪುಸ್ತಕಗಳನ್ನು ತರಬೇಕು ಎಂದು ಹೇಳಬೇಕು.ಶಾಲೆಯಲ್ಲಿ ಮಕ್ಕಳ ಅಟ್ಲಾಸ್ ಮತ್ತು ವಿಜ್ಞಾನದ ಅರ್ಥಕೋಶಗಳಂತಹ ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಪ್ರತಿದಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಬದಲು ಶಾಲೆಯಲ್ಲಿಯೇ ಬಿಟ್ಟು ಹೋಗುವ ವ್ಯವಸ್ಥೆಯನ್ನು ಅಧ್ಯಾಪಕರು ಮಾಡಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಶಾಲಾ ಮಕ್ಕಳ ಬ್ಯಾಗುಗಳ ತೂಕದ ಮಿತಿ:
ಒಂದು ಮತ್ತು ಎರಡನೇ ತರಗತಿ-ಒಂದೂವರೆ ಕೆ ಜಿಯಿಂದ ಎರಡು ಕೆಜಿ
ಮೂರು, ನಾಲ್ಕು ಮತ್ತು ಐದನೇ ತರಗತಿ -2ರಿಂದ 3ಕೆಜಿ
6ರಿಂದ ಒಂಭತ್ತನೇ ತರಗತಿ-3ರಿಂದ 4 ಕೆಜಿ
9 ಮತ್ತು 10ನೇ ತರಗತಿ -5 ಕೆಜಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com