ರೈಲು ವಿಳಂಬ: ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ನೀಟ್ ಅವಕಾಶ ಕಲ್ಪಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶಾವಕಾಶ ಕಲ್ಪಿಸುವ 'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ಬರೆಯಲು...
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶಾವಕಾಶ ಕಲ್ಪಿಸುವ 'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ಬರೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿಗಳ ಕಾರ್ಯಾಲಯ ಟ್ವೀಟ್ ಮಾಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಪತ್ರ ಬರೆಯಲಾಗಿದ್ದು, ಆದಷ್ಟು ಶೀಘ್ರ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ವಿಜಯಭಾಸ್ಕರ್ ಅವರಿಗೆ ಭರವಸೆ ನೀಡಿದ್ದಾರೆ.
ಮೇ 5 ರಂದು ಭಾನುವಾರ ನಡೆದ ನೀಟ್ ಪರೀಕ್ಷೆಯಿಂದ ನೂರಾರು ವಿದ್ಯಾರ್ಥಿಗಳು ವಂಚಿತರಾಗಿದ್ದರು. ಬೆಂಗಳೂರು, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಕೇಂದ್ರಗಳಲ್ಲಿ ಭಾನುವಾರ ಏಕಕಾಲದಲ್ಲಿ ಪರೀಕ್ಷೆ ನಡೆದಿದ್ದು, ಉತ್ತರ ಕರ್ನಾಟಕ ಭಾಗದಿಂದ ಪರೀಕ್ಷೆ ಬರೆಯಲು ಬೆಂಗಳೂರನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲು  ಸಕಾಲದಲ್ಲಿ ಬೆಂಗಳೂರನ್ನು ತಲುಪದ ಪರಿಣಾಮ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಿಂದಲೇ ವಂಚಿತರಾಗುವಂತಾಗಿತ್ತು.
ಹುಬ್ಬಳ್ಳಿಯಿಂದ ಹೊರಡುವ ಹಂಪಿ ಎಕ್ಸ್ ಪ್ರೆಸ್ ರೈಲು ಬಳ್ಳಾರಿ, ಹೊಸಪೇಟೆ ಮಾರ್ಗವಾಗಿ ಬೆಳಿಗ್ಗೆ 7ಕ್ಕೆ ಬೆಂಗಳೂರನ್ನು ತಲುಪಬೇಕಿತ್ತು. ಎನ್‍ಇಇಟಿ ಪರೀಕ್ಷೆ ಮಧ‍್ಯಾಹ್ನ 2 ಗಂಟೆಯಿಂದ ಆರಂಭವಾಗಿ 5ಕ್ಕೆ ಮುಗಿಯುವಂತೆ ವೇಳಾಪಟ್ಟಿ ನಿಗದಿಪಡಿಸಲಾಗಿತ್ತು.
ಪರೀಕ್ಷೆ ಬರೆಯಲು ಮತ್ತೆ ಅವಕಾಶ ಕಲ್ಪಿಸಿಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೂರಾರು ವಿದ್ಯಾರ್ಥಿಗಳೂ, ಪೋಷಕರು ಮನವಿ ಮಾಡಿದ್ದರು.
ಮನವಿ ಹಿನ್ನೆಲೆಯಲ್ಲಿಂದು ಸಭೆ ನಡೆಸಿದ ಕುಮಾರಸ್ವಾಮಿ ಮತ್ತೆ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಯಲ್ಲಿಂದು ಸಭೆ ನಡೆಸಿದರು.
ಸಭೆಯಲ್ಲಿನ ಸೂಚನೆಯಂತೆ ವಿಜಯಭಾಸ್ಕರ್ ಅವರು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com