ರೈಲು ವಿಳಂಬ: ನೀಟ್ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಖುಷಿಯ ಸಂಗತಿ, ಮರುಪರೀಕ್ಷೆಗೆ ರೈಲ್ವೆ ಶಿಫಾರಸು?

ಭವಿಷ್ಯದ ಕುರಿತು ನಾನಾ ಕನಸುಗಳನ್ನು ಕಟ್ಟಿಕೊಂಡು ನೀಟ್ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ರೈಲು ವಿಳಂಬವಾಗಿದ್ದರಿಂದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ವಂಚಿತರಾಗಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಭವಿಷ್ಯದ ಕುರಿತು ನಾನಾ ಕನಸುಗಳನ್ನು ಕಟ್ಟಿಕೊಂಡು ನೀಟ್ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ರೈಲು ವಿಳಂಬವಾಗಿದ್ದರಿಂದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ವಂಚಿತರಾಗಿದ್ದು ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಶಿಫಾರಸು ಮಾಡುವುದಾಗಿ ರೇಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆ ಬಗ್ಗೆ ತಿಳಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಭಾನುವಾರವೇ ದೂರವಾಣಿ ಕರೆ ಮಾಡಿದ್ದೇವು. ಆದರೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಹೀಗಾಗಿ ಸೋಮವಾರ ಪತ್ರದ ಮೂಲಕ ಎಚ್ಆರ್ಡಿ ಸಚಿವಾಲಯಕ್ಕೆ ಮರು ಪರೀಕ್ಷೆ ಬಗ್ಗೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿನಯ್ ಎಂಬುವರು ತಿಳಿಸಿದ್ದಾರೆ.
ಹಂಪಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16591) ಬೆಳಗ್ಗೆ ಏಳು ಗಂಟೆಗಾಗಲೇ ಬೆಂಗಳೂರು ತಲುಪಬೇಕಾಗಿದ್ದ ಗಾಡಿ ಸುಮಾರು ಎರಡೂವರೆ ಗಂಟೆ ತಡವಾಗಿ ಆಗಮಿಸಿದೆ. ಇದರಿಂದಾಗಿ ಕೊಪ್ಪಳ, ಬಳ್ಳಾರಿಯ ಅನೇಕ ವಿದ್ಯಾರ್ಥಿಗಳು ತಮ್ಮ "ನೀಟ್" ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ರೈಲು ಅಧಿಕಾರಿಗಳು ಹೇಳಿದಂತೆ ಗುಂತಕಲ್ ಹಾಗೂ ಕಲ್ಲೂರು ನಡುವೆ ಕಾಮಗಾರಿ ಕೆಲಸಗಳು ನಡೆಯುತ್ತಿರುವ ಕಾರಣ ಹಂಪಿ ಎಕ್ಸ್ ಪ್ರೆಸ್ ಪರ್ಯಾಯ ಮಾರ್ಗದಲ್ಲಿ ಸಂಚರಿಸಿತ್ತು. ಇನ್ನು ಪರ್ಯಾಯ ಮಾರ್ಗ 120 ಕಿಮೀ ಹೆಚ್ಚುವರಿ ದೂರವನ್ನು ಹೊಂದಿದ್ದು ರೈಲು ವಿಳಂಬಕ್ಕೆ ಕಾರಣವೆನ್ನಲಾಗಿದೆ. ರೈಲ್ವೆ ಅಧಿಕಾರಿಗಳು "ನೀಟ್" ಪರೀಕ್ಷಾರ್ಥಿಗಳಿಗೆ ಈ ರೈಲು ವಿಳಂಬದ ಕುರಿತು ಪೂರ್ವ ಸೂಚನೆ ನೀಡುವ ಮೊಬೈಲ್ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ, ಆದರೆ ವಿದ್ಯಾರ್ಥಿಗಳು ಮಾತ್ರ ತಾವು ಅಂತಹಾ ಯಾವ ಸಂದೇಶ ಸ್ವೀಕರಿಸಿಲ್ಲ ಎಂದಿದ್ದಾರೆ.
ಮೇ  5, ಭಾನುವಾರ 15 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ ಪರೀಕ್ಷೆ) ಬರೆದಿದ್ದಾರೆ. ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ್ದ ಈ ಪರೀಕ್ಷೆ ಭಾರತದಾದ್ಯಂತ  ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ಏಕೈಕ ಪರೀಕ್ಷೆಯಾಗಿದೆ. ಭಾರತದಾದ್ಯಂತ  ಇಂದು ಒಟ್ಟು  154 ನಗರಗಳಲ್ಲಿ ಆಯ್ದ ಕೇಂದ್ರಗಳಲ್ಲಿ 2ರಿಂದ  5 ಗಂಟೆವರೆಗೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com