ರಾಜ್ಯ
ಅಕ್ಷಯ ತೃತೀಯ ಶುಭ ದಿನ ಎಂದು ಸಾಬೀತುಪಡಿಸಲಿ, 10 ಲಕ್ಷ ರೂ. ಕೊಡುತ್ತೇನೆ: ಮಾಜಿ ಶಾಸಕ ಸೋಮಶೇಖರ್ ಸವಾಲು!
ಅಕ್ಷಯ ತೃತೀಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಸಾಬೀತುಪಡಿಸಿದವರಿಗೆ 10 ಲಕ್ಷ ...
ಮೈಸೂರು: ಅಕ್ಷಯ ತೃತೀಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಸಾಬೀತುಪಡಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಎಂ ಕೆ ಸೋಮಶೇಖರ್ ಸವಾಲು ಹಾಕಿದ್ದಾರೆ.
ಅಕ್ಷಯ ತೃತೀಯವೆಂದರೆ ಸಮೃದ್ಧಿ ತರುವ ದಿನ ಎಂಬ ನಂಬಿಕೆ ಜನಸಾಮಾನ್ಯರಲ್ಲಿ. ಈ ದಿನದಂದು ಅನೇಕರು ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ.
ಆದರೆ ರಾಜಕಾರಣಿ ಎಂ ಕೆ ಸೋಮಶೇಖರ್ ಇದೆಲ್ಲ ಸುಳ್ಳು ಎನ್ನುತ್ತಾರೆ. ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬುದೆಲ್ಲ ಮೂಢನಂಬಿಕೆ. ಜನರಲ್ಲಿ ತಪ್ಪು ಸಂದೇಶವನ್ನು ಹಬ್ಬಿಸಲಾಗುತ್ತಿದೆ. ಅಕ್ಷಯ ತೃತೀಯ ದಿನ ಚಿನ್ನ ಸೇರಿದಂತೆ ದುಬಾರಿ ವಸ್ತುಗಳನ್ನು ಖರೀದಿಸಿದವರಿಗೆ ಒಳ್ಳೆಯದಾಗಿದ್ದನ್ನು ಸಾಬೀತುಪಡಿಸಲಿ ನೋಡೋಣ, ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಅವರು ನಿನ್ನೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,ಇವೆಲ್ಲ ಗ್ರಾಹಕರನ್ನು ಸೆಳೆಯಲು ಚಿನ್ನದ ಅಂಗಡಿಯವರು ಮಾಡುವ ನಾಟಕವಷ್ಟೆ, ಇವಕ್ಕೆಲ್ಲಾ ಕಾರಣ ಜನರ ಮೂಢನಂಬಿಕೆ, ಜನ ಏನು ಹೇಳಿದರೂ ನಂಬಿ ಬಿಡುತ್ತಾರೆ. ನಗರ ಪ್ರದೇಶಗಳಲ್ಲಿ ಬಹುತೇಕ ಮಂದಿ ತಿಂಗಳ ವರಮಾನ ನಂಬಿಕೊಂಡು ಬದುಕುವವರು. ಅಕ್ಷಯ ತೃತೀಯ ಹೆಸರಿನಲ್ಲಿ ಇಂತವರನ್ನು ಬ್ರೈನ್ ವಾಶ್ ಮಾಡಿ ಚಿನ್ನ ಖರೀದಿಸಿದರೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದೆಲ್ಲ ಹೇಳಿ ಮರುಳುಗೊಳಿಸುತ್ತಾರೆ. ವಾಸ್ತವವಾಗಿ ಈ ಮೂಢನಂಬಿಕೆಯಿಂದ ಚಿನ್ನ ಖರೀದಿಸಲು ಸಾಲ ಮಾಡಲು ಹೋಗಿ ಕಷ್ಟಕ್ಕೆ ಒಳಗಾಗುತ್ತಾರೆ ಎಂದು ಸೋಮಶೇಖರ್ ವಾದಿಸುತ್ತಾರೆ.