ಯಡಿಯೂರಪ್ಪ
ಯಡಿಯೂರಪ್ಪ

ಫಿಕ್ಸಾಯ್ತು ೨೫ ಸಾವಿರ ರೂ. ಪರಿಹಾರ, ಸಿಎಂ ಯಡಿಯೂರಪ್ಪ ಆದೇಶಕ್ಕೆ ಸಿಗಲೇ ಇಲ್ಲ ಕಿಮ್ಮತ್ತು!

ಪ್ರವಾಹ ಸಂತ್ರಸ್ತ ನೇಕಾರ ಕುಟುಂಬಗಳ ಹಾನಿಗೊಳಗಾದ ಪ್ರತಿ ಮಗ್ಗಕ್ಕೆ ೨೫ ಸಾವಿರ ರೂ. ನೀಡಬೇಕು ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದೇಶಕ್ಕೆ ಕಂದಾಯ ಇಲಾಖೆ ಕೊನೆಗೂ ಯಾವುದೇ....

ಬಾಗಲಕೋಟೆ: ಪ್ರವಾಹ ಸಂತ್ರಸ್ತ ನೇಕಾರ ಕುಟುಂಬಗಳ ಹಾನಿಗೊಳಗಾದ ಪ್ರತಿ ಮಗ್ಗಕ್ಕೆ ೨೫ ಸಾವಿರ ರೂ. ನೀಡಬೇಕು ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದೇಶಕ್ಕೆ ಕಂದಾಯ ಇಲಾಖೆ ಕೊನೆಗೂ ಯಾವುದೇ ಕಿಮ್ಮತ್ತು ನೀಡಲೇ ಇಲ್ಲ. ಪರಿಣಾಮವಾಗಿ ಪ್ರವಾಹ ಸಂತ್ರಸ್ತ ನೇಕಾರ ಕುಟುಂಬಗಳ ಮಗ್ಗಗಳಿಗಾದ ಹಾನಿಗೆ ೨೫ ಸಾವಿರ ರೂ. ಪರಿಹಾರ ಪಡೆದುಕೊಂಡು ಸುಮ್ಮನಾಗಬೇಕಾದ ಸಂಕಷ್ಟ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಆಗಸ್ಟ್ ನಲ್ಲಿ ಉಂಟಾದ ನೆರೆಯಿಂದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ೧೭೦೦ ಕ್ಕೂ ಅಧಿಕ ಪಾವರ್‌ಲೂಮ್ ಮತ್ತು ಕೈಮಗ್ಗಗಳು ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ಸಂಪೂರ್ಣ ಹಾಳಾಗಿದ್ದವು. ನೇಕಾರರು ಒಂದೊಂದು ಮಗ್ಗದ ಮೇಲೂ ಲಕ್ಷಾಂತರ ರೂ. ಬಂಡವಾಳ ಹಾಕಿದ್ದರು. ಜತೆಗೆ ಮನೆಯಲ್ಲಿ ಉತ್ಪಾದನೆಗೊಂಡಿದ್ದ ಸಾವಿರಾರು ಸೀರೆಗಳು ತೋಯ್ದು ಹಾಳಾಗಿದ್ದವು. ಇದರಿಂದಾಗಿ ಅವರ ಬದುಕೇ ಬಿದ್ದು ಹೋಗಿತ್ತು. 

ಈ ವೇಳೆ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನೇಕಾರರ ಸಹಾಯಕ್ಕೆ ಮುಂದಾಗಿ ಪ್ರತಿ ಮಗ್ಗಕ್ಕೆ ೨೫ ಸಾವಿರ ಪರಿಹಾರ ಘೋಷಿಸಿ, ಆದೇಶ ಕೂಡ ಹೊರಡಿಸಿದ್ದರು. ಮುಖ್ಯಮಂತ್ರಿಗಳ ಆದೇಶದಿಂದ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದ ಪ್ರವಾಹ ಸಂತ್ರಸ್ತರು, ಇನ್ನೆನು ಪ್ರತಿ ಮಗ್ಗಕ್ಕೆ ೨೫ ಸಾವಿರ ರೂ.ಗಳಾದರೂ ಪರಿಹಾರ ಸಿಕ್ಕಲ್ಲಿ ಮತ್ತೆ ಮಗ್ಗಗಳನ್ನು ಆರಂಭಿಸಲು ಅನುಕೂಲವಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಆ ನಿರೀಕ್ಷೆ ಇದೀಗ ಸಂಪೂರ್ಣ ಹುಸಿಯಾಗುವಂತೆ ಕಾಣಿಸುತ್ತಿದೆ.

ಕಂದಾಯ ಇಲಾಖೆ ಸಿಎಂ ಆದೇಶಕ್ಕೆ ತಿದ್ದುಪಡಿ ತಂದು ಪ್ರತಿ ಮಗ್ಗಕ್ಕೆ ೨೫ ಸಾವಿರು ರೂ. ಬದಲಿಗೆ ಪ್ರತಿ ಕುಟುಂಬಕ್ಕೆ ೨೫ ಸಾವಿರ ರೂ. ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ತಿದ್ದುಪಡಿ ಆದೇಶ ವಿರೋಧಿಸಿ ನೇಕಾರರು ಬೀದಿಗಳಿದು ಪ್ರತಿಭಟನೆ ನಡೆಸಿದರು. ಅನೇಕ ಜನ ಶಾಸಕರುಗಳು ನೇಕಾರರ ಪ್ರತಿ ಮಗ್ಗಕ್ಕೆ ೨೫ ಸಾವಿರ ರೂ.ಪರಿಹಾರ ನೀಡುವಂತೆ ಸಿಎಂಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಪರಿಹಾರಕ್ಕೆ ಆದೇಶ ಹೊರಡಿಸಿರುವ ಸಿಎಂ ಕೂಡ ಈ ಬಗ್ಗೆ ಏನೂ ಹೇಳುತ್ತಿಲ್ಲ.

ಪರಿಹಾರ ವಿತರಣೆ ಕುರಿತು ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲರು ಕುತೂಹಲಕರ ಸಂಗತಿಯೊಂದನ್ನು ಹೇಳುತ್ತಿದ್ದಾರೆ. ಪ್ರವಾಹ ಸಂತ್ರಸ್ತ ನೇಕಾರರ ಪ್ರತಿ ಮಗ್ಗಕ್ಕೆ ೨೫ ಸಾವಿರ ರೂ. ಪರಿಹಾರ ನೀಡಬೇಕು ಎಂದು “ಹೌಸ್”ನಲ್ಲಿ ಚರ್ಚೆ ನಡೆದು ನಿರ್ಧಾರ ಕೈಗೊಳ್ಳಲಾಗಿದೆ. ಆ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಬರುವುದಿಲ್ಲ. ಒಂದೊಮ್ಮೆ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಅದು “ಅಫೆನ್ಸ್” ಆಗಲಿದೆ ಎನ್ನುತ್ತಿದ್ದಾರೆ. ಆದರೆ ಸರ್ಕಾರದ ಅಧಿಕಾರಿಗಳು ಮಾತ್ರ ನೇಕಾರರ ಪ್ರತಿ ಕುಟುಂಬಕ್ಕೆ ೨೫ ಸಾವಿರ ರೂ. ಪರಿಹಾರ ವಿತರಣೆ ಪ್ರಕ್ರಿಯೆ ಮುಂದುವರಿಸಿದೆ. ಹಾಗಾದರೆ ಮೇಲ್ಮನೆ ಪ್ರತಿಪಕ್ಷ ನಾಯಕರ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಾ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಪ್ರವಾಹ ಸಂತ್ರಸ್ತ ನೇಕಾರರ ಪರಿಹಾರ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಪ್ರತಿಪಕ್ಷಗಳು ಎಷ್ಟರ ಮಟ್ಟಿಗೆ ಮುಂದೆ ಬರಲಿವೆ ಎನ್ನುವುದು ಅಷ್ಟೆ ಕುತೂಹಲದ ಸಂಗತಿಯಾಗಿದೆ. ಪ್ರತಿಪಕ್ಷಗಳೂ ಕೈಕಟ್ಟಿ ಕುಳಿತಲ್ಲಿ ನೇಕಾರರ ಸ್ಥಿತಿ ಅಧೋಗತಿ ಆಗಲಿದೆ ಎಂದೇ ನೇಕಾರ ಮುಖಂಡರು ತಮ್ಮವರ ಸ್ಥಿತಿ ಕುರಿತು ವಿಶ್ಲೇಷಿಸುತ್ತಿದ್ದಾರೆ.

- ವಿಠ್ಠಲ ಆರ್ ಬಲಕುಂದಿ

Related Stories

No stories found.

Advertisement

X
Kannada Prabha
www.kannadaprabha.com