ಸಹಾಯ ಮಾಡದ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಾವೇ ಚಪ್ಪಲೀಲಿ ಹೊಡ್ಕೋಬೇಕು: ಶಂಕರ್ ಬಿದರಿ

ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಲು ಮುಂದಾಗದೇ ಇರುವಂತಹ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮ್ಮನ್ನು ನಾವೇ ಚಪ್ಪಲಿ ತಗೆದುಕೊಂಡು ಹೊಡೆದುಕೊಳ್ಳಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದಶಕ ಶಂಕರ್ ಬಿದರಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಂಕರ್ ಬಿದರಿ
ಶಂಕರ್ ಬಿದರಿ
Updated on

ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಲು ಮುಂದಾಗದೇ ಇರುವಂತಹ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮ್ಮನ್ನು ನಾವೇ ಚಪ್ಪಲಿ ತಗೆದುಕೊಂಡು ಹೊಡೆದುಕೊಳ್ಳಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದಶಕ ಶಂಕರ್ ಬಿದರಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಭಾಷ್ಯಂ ಸರ್ಕಲ್‌ ನಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯನ್ನು ಖಂಡಿಸಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕಳೆದ 70 ವರ್ಷಗಳಲ್ಲಿ ಈ ರೀತಿಯ ಪ್ರವಾಹ ಯಾವತ್ತೂ ಆಗಿಲ್ಲ. ಉತ್ತರ ಕರ್ನಾಟಕದ ಜನರು ಪ್ರವಾಹದಿಂದ ನಲುಗಿಹೋಗಿದ್ದಾರೆ. ಪ್ರವಾಹವಾಗಿ 60 ದಿನಗಳು ಕಳೆದರೂ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ. ಇಷ್ಟು ದಿನಗಳು ಕಳೆದರೂ ಪರಿಹಾರ ನೀಡದೆ ಕೇಂದ್ರ ಸರಕಾರ ಏನು ಮಾಡುತ್ತಿದೆ? ನಮ್ಮ ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಜನರು ಮುಗ್ದರು. ಕಳೆದ 20 ವರ್ಷಗಳಿಂದ ಒಂದು ಪಕ್ಷಕ್ಕೆ ತಮ್ಮ ನಿಷ್ಟೆಯನ್ನು ತೋರಿಸುತ್ತಾ ಬಂದಿದ್ದಾರೆ. ಆದರೆ, ಇಂತಹ ಆಪತ್ತಿನ ಸಮಯದಲ್ಲಿ ಯಾವುದೇ ಸಹಾಯವನ್ನು ಮಾಡದ ಸಂಸದರನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪಾಗಿ ಪರಿಣಮಿಸಿದೆ. ಇಂತಹ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಾವೇ ನಮ್ಮ ಚಪ್ಪಲಿಯಲ್ಲಿ ಹೊಡೆದುಕೊಳ್ಳುವಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
 
ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಮನೆ - ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಬದುಕು ಬರ್ಬರವಾಗಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡಿಗಾಸೂ ನೀಡಿಲ್ಲ. ನೆರೆ ಪೀಡಿತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಆದರೆ ಉತ್ತರ ಭಾರತದ ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ. ನೆರವು ನೀಡುವ ಭರವಸೆಯನ್ನು ನೀಡಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಆದರೆ ಕರ್ನಾಟಕವನ್ನು ಸಂಪೂರ್ಣವಾಗಿ ಮರೆತು ಹೋಗಿದ್ದಾರೆ ಎಂದರು.

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯನ್ನು ಖಂಡಿಸುತ್ತದೆ. ಈ ಧೋರಣೆ ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ತಮ್ಮ ಆಕ್ರೋವ್ಯಕ್ತಪಡಿಸಿದರು. ರಾಜಾಜಿನಗರ ಗ್ರೌಂಡ್‌ ನಿಂದ ಹೊರಟ ಪ್ರತಿಭಟನಾಕಾರರು ಪ್ರೀಡಂ ಪಾರ್ಕನಲ್ಲಿ ತಮ್ಮ ಪ್ರತಿಭಟನೆಯನ್ನು ಸಮಾಪ್ತಿಗೊಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com