

ಬೆಂಗಳೂರು: ಕರ್ನಾಟಕ ರಾಜ್ಯವು 2013ರಿಂದ 2018ರವರೆಗೆ ಆದಾಯ ಹೆಚ್ಚಳವನ್ನು ಕಾಯ್ದುಕೊಂಡಿದ್ದು, ಕರ್ನಾಟಕಕ್ಕೆ ನಿಗದಿಗೊಳಿಸಿದ ವಿತ್ತೀಯ ಕೊರತೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟಿದೆ ಎಂದು ರಾಜ್ಯದ ಪ್ರಧಾನ ಲೆಕ್ಕಾಧಿಕಾರಿಗಳ ಲೆಕ್ಕಪರಿಶೋಧನೆ ವರದಿ ತಿಳಿಸಿದೆ. ಅಲ್ಲದೇ ಜಿಎಸ್‍ಡಿಪಿಯನ್ನು 2013ರಿಂದ 2018ರವರೆಗೂ ಶೇಕಡಾ 7ರಿಂದ ಶೇ, 8ರಷ್ಟನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ಹೇಳಿದೆ.
ಈ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಸದನದಲ್ಲಿ ಮಂಡಿಸಿದರು. 2018ರಲ್ಲಿ ಕರ್ನಾಟಕವು 4,518 ಕೋಟಿ ರೂಪಾಯಿ ಆದಾಯ ಹೆಚ್ಚಳವನ್ನು ದಾಖಲಿಸಿತ್ತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 3,225 ಕೋಟಿ (ಶೇ 249) ಹೆಚ್ಚಳವಾಗಿದೆ.
2016-17ಕ್ಕೆ ಹೋಲಿಸಿದಲ್ಲಿ ಕರ್ನಾಟಕದ ವಿತ್ತೀಯ ಕೊರತೆಯ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು ಎಂಬುದಾಗಿ ವರದಿ ತಿಳಿಸಿದೆ. 2017-18ರಲ್ಲಿ ವಿತ್ತೀಯ ಕೊರತೆ 31,101 ಕೋಟಿ ರೂಪಾಯಿ ಆಗಿತ್ತು ಎಂಬುದಾಗಿ ವರದಿ ವಿವರಿಸಿದೆ. ಪ್ರಾಥಮಿಕ ವಿತ್ತೀಯ ಕೊರತೆಯು 16,128 ಕೋಟಿ ಇತ್ತು. ಇದು 2016-17ಕ್ಕೆ ಹೋಲಿಸಿದರೆ 314 ಕೋಟಿ ರೂಪಾಯಿ ಆಗಿತ್ತು.
ಬೆಂಗಳೂರು ಮೆಟ್ರೊ ನಿಗಮಕ್ಕೆ 2,768 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದರಿಂದಾಗಿ ಆದಾಯದಲ್ಲಿ ಕೃತಕ ಹಣದುಬ್ಬರ ಕಂಡು ಬಂತೇ ವಿನಾ, ಇದರಿಂದ ಆದಾಯ ಹೆಚ್ಚಳಾತಿ ಮೇಲೆ ಯಾವುದೇ ದುಷ್ಪರಿಣಾಮ ಆಗಲಿಲ್ಲ ಎಂಬುದಾಗಿ ವರದಿ ತಿಳಿಸಿದೆ.
ಸಕಾರಾತ್ಮಕ ಅಂಶಗಳ ನಡುವೆ ವರದಿ ಕೆಲವು ನಕಾರಾತ್ಮಕ ಅಂಶಗಳನ್ನೂ ಗುರುತಿಸಿದೆ. ಪಂಚಾಯತ್ ರಾಜ್ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅನುದಾನವನ್ನು 2018ರ ಕೊನೆಯವರೆಗೂ ಬಿಡುಗಡೆ ಮಾಡಿಲ್ಲ ಎಂದು ಹೇಳಿದೆ. 2016-17ಕ್ಕೆ ಹೋಲಿಸಿದರೆ ತೆರಿಗೆ ಖರ್ಚು ಶೇಕಡಾ 8ರಷ್ಟಿತ್ತು.