ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಕೊಡಿಸಲು ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ: ಶ್ರೀರಾಮುಲು
ಚಿತ್ರದುರ್ಗ: ವಾಲ್ಮೀಕಿ ಸಮುದಾಯಕ್ಕೆ ಶೇ 7.5 ರಷ್ಟು ಮೀಸಲಾತಿ ಕೊಡಿಸುವ ಜವಾಬ್ದಾರಿಯನ್ನು ನನಗೆ ಬಿಟ್ಟುಬಿಡಿ. ಕೊಟ್ಟ ಮಾತು ಉಳಿಸಿಕೊಳ್ಳದಿದ್ದಾರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಶ್ರೀರಾಮುಲು ಭಾವನಾತ್ಮಕವಾಗಿ ಸಮುದಾಯದ ಜನರಿಗೆ ಭರವಸೆ ನೀಡಿದ್ದಾರೆ.
ಜಿಲ್ಲಾಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಜನಾಂಗ ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದೆ. ಸಮುದಾಯದ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ಕಲ್ಪಿಸುವುದು ಸಮುದಾಯದ ಬಹುದಿನಗಳ ಬೇಡಿಕೆಯಾಗಿದೆ ಎಂದರು.
ಮೀಸಲಾತಿ ಕೊಡಿಸುವ ಜವಾಬ್ದಾರಿ ನನ್ನದು. ಮಿಸಲಾತಿ ಪಡೆಯುವ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.ಮೀಸಲಾತಿ ಕೊಡಿಸುವುದು ನನ್ನಿಂದ ಸಾಧ್ಯವಾಗದಿದ್ದಲ್ಲಿ ಸಕ್ರಿಯ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ನಾಯಕ ಸಮುದಾಯಕ್ಕೆ ಶ್ರೀರಾಮುಲು ಅಭಯ ನೀಡಿದರು. ಸಮುದಾಯದ ಖುಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಇನ್ನು, ಎರಡ್ಮೂರು ತಿಂಗಳಲ್ಲಿ ಮೀಸಲಾತಿ ವಿಚಾರ ಒಂದು ಹಂತಕ್ಕೆ ಬರಲಿದೆ" ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.
"ನಮ್ಮ ಸಮುದಾಯವನ್ನು ಬಳಸಿಕೊಂಡು, ಕಸದಂತೆ ಎಸೆಯುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು. ಮೊಳಕಾಲ್ಮೂರು ನಲ್ಲಿ ನಾನು ಸ್ಪರ್ಧಿಸಿದಾಗಲೂ, ನನ್ನ ಬಗ್ಗೆ ಅಪಪ್ರಚಾರ ಮಾಡಲಾಯಿತು" ಎಂದು ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.
"ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಸಿನವರು ನಮ್ಮ ಸರಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ, ಜನರು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ" ಎಂದು ಶ್ರೀರಾಮುಲು, ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.