
ಹಾಸನ: ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೆ ಈಗ ದೊಡ್ಡ ಗಂಡಾಂತರ ಕಾದಿದ್ದು, ಅವರು ದೈವೀಕ ಕಾರ್ಯಗಳಿಂದ ಪರಿಹಾರ ಕಂಡುಕೊಳ್ಳದೇ ಹೋದರೆ ಮೃತ್ಯು ಕೂಡ ಎದುರಾಗಬಹುದು ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಶುಕ್ರವಾರ ಭವಿಷ್ಯ ನುಡಿದಿದ್ದಾರೆ.
ಇಂದು ಹಾಸನಾಂಬೆಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ, ದೇಶದ ಪ್ರಧಾನಿ ಹಾಗೂ ರಾಜ್ಯ ರಾಜಕೀಯಕ್ಕೆ ಸಂಬಂಧಪಟ್ಟಂತೆ ಭವಿಷ್ಯ ನುಡಿದಿದ್ದಾರೆ.
ನವೆಂಬರ್ 4ರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ ಇದೆ. ಅವರು ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡೂ ಮುಕ್ಕಾಲು ವರ್ಷ ಪ್ರಧಾನಿಯಾಗಿ ಇರುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ರಾಜ್ಯದಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರವಧಿ ಪೂರೈಸುವುದಿಲ್ಲ. ಹೊಸ ಸರ್ಕಾರ ಬಂದರೆ ಹೊಸಬರೇ ಮುಖ್ಯಮಂತ್ರಿಯಾಗುತ್ತಾರೆ. ಯಡಿಯೂರಪ್ಪನವರಿಗೆ ಪೂರ್ಣ ಅವಧಿಗೆ ಸಿಎಂ ಆಗಿರುವ ಅವಕಾಶ ಇಲ್ಲವೇ ಇಲ್ಲ. ಸಮ್ಮಿಶ್ರ ಸರ್ಕಾರ ಇನ್ನು ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಇದೇ ವೇಳೆ ಡಿ.ಕೆ.ಶಿವಕುಮಾರ್ ವಿಚಾರ ಪ್ರಸ್ತಾಪ ಮಾಡಿದ ಅವರು, ಕೋಟಿ ಕೋಟಿ ಹಣ ಮಾಡಿದವರು ಕೃಷ್ಣ ಜನ್ಮಸ್ಥಳಕ್ಕೆ ಹೋಗಲೇಬೇಕು. ಮುಂದಿನ 10 ವರ್ಷದಲ್ಲಿ ಡಿ.ಕೆ.ಶಿವಕುಮಾರ್ ಒಂದು ಬಾರಿ ಮುಖ್ಯಮಂತ್ರಿಯಾಗೋದು ನಿಶ್ಚಿತ. 10 ವರ್ಷಗಳಲ್ಲಿ ಐದು ವರ್ಷ ಸಿಎಂ ಆಗುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದರು.
ನವೆಂಬರ್ 4 ರ ನಂತರ ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಲಿದ್ದು, ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದ್ದಾರೆ.
Advertisement