ದಾವಣಗೆರೆ: ದೇವರಿಗೆ ಬಿಟ್ಟಿದ್ದ ಕೋಣವೊಂದಕ್ಕೆ ಸಂಬಂಧಪಟ್ಟಂತೆ ಎರಡು ಗ್ರಾಮಗಳ ನಡುವೆ ಜಗಳ ಶುರುವಾಗಿದ್ದು, ಇದೀಗ ಆ ಕೋಣಕ್ಕೆ ಡಿಎನ್ ಎ ಪರೀಕ್ಷೆ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.
ಎರಡು ದಿನಗಳ ಹಿಂದಷ್ಟೇ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಹಾಗೂ ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮಸ್ಥರ ನಡುವೆ ಕೋಣಕ್ಕೆ ಸಂಬಂಧ ಪಟ್ಟಂತೆ ಜಗಳ ನಡೆದಿತ್ತು. ಇದೀಗ ಕೋಣವನ್ನು ಬಿಟ್ಟುಕೊಡಲು ಸಿದ್ಧರಿರದ ಎರಡೂ ಗ್ರಾಮಗಳು ಕಾನೂನಿನ ಮೊರೆಹೋಗಿವೆ.
ಆಗಿದ್ದಿಷ್ಟೆ. ಎರಡು ಗ್ರಾಮಗಳಲ್ಲಿದ್ದ ಎರಡು ದೇವರ ಕೋಣಗಳು ಕಣ್ಮರೆಯಾಗಿದ್ದವು. ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ, ಗ್ರಾಮದೇವತೆ ಮಾರಿಕಾಂಬ ದೇವಿಗೆ ಬಿಟ್ಟಿದ್ದ ದೇವರ ಕೋಣ ಕಳುವಾಗಿದ್ದು, ಅದನ್ನು ಹುಡುಕಿಕೊಂಡುವಂತೆ ಗ್ರಾಮಸ್ಥರು ಹೊನ್ನಾಳಿ ಪೊಲೀಸರ ಮೊರೆ ಹೋಗಿದ್ದರು.
ಶಿವಮೊಗ್ಗ ತಾಲೂಕಿನ ಹಾರ್ನಹಳ್ಳಿ ಗಾಮದವರು, ಈ ಕೋಣವನ್ನು ತಮ್ಮೂರ ಕೋಣ ಎಂದು ತಿಳಿದು ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈ ವಿಷಯ ತಿಳಿದ ಬೇಲಿಮಲ್ಲೂರಿನ ನೂರಾರು ಗ್ರಾಮಸ್ಥರು ಹಾರ್ನಹಳ್ಳಿಗೆ ಹೋಗಿ ಕೋಣ ತಮ್ಮದು ವಾಪಸು ಕೊಡಿ ಎಂದು ಕೇಳಿದ್ದಾರೆ. ನಂತರ ಎರಡೂ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದೆ. ಆ ಕೋಣ ತಮ್ಮದೆಂದು ಎರಡೂ ಗ್ರಾಮಸ್ಥರು ಜಿದ್ದಿಗೆ ಬಿದ್ದಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪರಿಸ್ಥಿತಿ ಕೈಮೀರುತ್ತಿದೆ ಎಂಬ ಸಂದರ್ಭದಲ್ಲಿ ಹಿರಿಯರೊಬ್ಬರು ಕಾನೂನಿನ ಮೊರೆ ಹೋಗಲು ತಿಳಿಸಿದ್ದಾರೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಬೇಲಿಮಲ್ಲೂರಿನ ಗ್ರಾಮಸ್ಥರೊಂದಿಗೆ ಸಿಪಿಐ ಟಿ.ವಿ. ದೇವರಾಜ್ ಚರ್ಚೆ ನಡೆಸಿದ್ದರು. ಕೋಣ ತಮ್ಮ ಗ್ರಾಮಕ್ಕೆ ಸೇರಿದ್ದು. ಅದರ ತಾಯಿತಂದೆ (ಎಮ್ಮೆ-ಕೋಣ) ನಮ್ಮ ಗ್ರಾಮದಲ್ಲೇ ಇವೆ. ಅವುಗಳ ಹಾಗೂ ಹಾರ್ನಹಳ್ಳಿಯಲ್ಲಿರುವ ಕೋಣದ ಡಿಎನ್‌ಎ ಪರೀಕ್ಷೆ ನಡಿಸಿದರೆ ಸತ್ಯಾಂಶ ಹೊರಬರುತ್ತದೆ ಎಂದು ಗ್ರಾಮಸ್ಥರು ಹೊಸ ಆಲೋಚನೆಯನ್ನು ಹೊರಹಾಕಿದರು.
ಕೋಣದ ಡಿಎನ್‌ಎ ಪರೀಕ್ಷೆ ಮಾಡಿಸಿ ಅದು ಯಾವ ಗ್ರಾಮದವರಿಗೆ ಸೇರಿದ್ದು ಎಂದು ತೀರ್ಮಾನಿಸಲಾಗುವುದು. ಅಲ್ಲಿವರೆಗೆ ಕೋಣವನ್ನು ಶಿವಮೊಗ್ಗದ ಗೋಶಾಲೆಯಲ್ಲಿ ಇರಿಸಲಾಗುವುದು ಎಂದು ಗ್ರಾಮಸ್ಥರನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ.
ಕೋಣದ ಡಿಎನ್‌ಎ ಟೆಸ್ಟ್ ಮಾದರಿಯನ್ನು ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸ್ ಪಿ ಹನುಮಂತರಾಯ ತಿಳಿಸಿದ್ದಾರೆ.
Advertisement