ವಿಜಯಪುರ: ತೆರೆಯದ ಆರೋಗ್ಯ ಕೇಂದ್ರ, ಹಳ್ಳಿ ಮಹಿಳೆಯರ ನೆರವಿನಿಂದ ಹೆಣ್ಣು ಮಗುವಿನ ಜನ್ಮ ನೀಡಿದ ಮಹಿಳೆ!
ವಿಜಯಪುರ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ್ದ ಕಾರಣ ಕೇಂದ್ರದ ಹೊರಗೇ ಗರ್ಭಿಣಿಯೊಬ್ಬರು ಸ್ಥಳೀಯ ಮಹಿಳೆಯರ ಸಹಕಾರದಿಂದ ಮಗುವಿಗೆ ಜನ್ಮ ನೀಡಿರುವ ಘಟನೆ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನಲ್ಲಿ ನಡೆದಿದೆ.
ಸಿಂಧಗಿಯ ಬಲ್ಗನೂರು ಗ್ರಾಮದಲ್ಲಿ ನಡೆಅದ ಘಟನೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಮುಚ್ಚಲಾಗಿದ್ದು ವೈದ್ಯಕೀಯ ಸೇವೆ ಲಭ್ಯವಿಲ್ಲ. ಆಗ ಅಲ್ಲಿನ ಹೊರಾಂಗಣ ಆವರಣದಲ್ಲೇ ಗರ್ಭಿಣಿ ಮಘಿಳೆಯೊಬ್ಬರು ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಹಳ್ಳಿಯ ಮಹಿಳೆಯರು ಅವರಿಗೆ ಸಹಾಯ ಮಾಡಿದ್ದು ಇದೀಗ ಮಹಿಳೆ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.
ಸುನಂದಾ ಹೀಗೆ ಗ್ರಾಮಸ್ಥರ ನೆರವಿನಿಂದ ಹೆರಿಗೆ ಮಾಡಿಸಿಕೊಂಡ ಮಹಿಳೆಯಾಗಿದ್ದು ಈಕೆ ನಿಯತವಾಗಿ ಈ ಆರೋಗ್ಯ ಕೇಂದ್ರಕ್ಕೆ ತಪಾಸಣೆಗಾಗಿ ಬರುತ್ತಿದ್ದರು. ಆದರೆ ಆರೋಗ್ಯ ಕೇಂದ್ರ ಕೆಲ ದಿನಗಳಿಂದ ಮುಚ್ಚಿದ್ದು ಇದೇ ವೇಳೆ ಸುನಂದಾಗೆ ಹೆರಿಗೆ ಬೇನೆ ಕಾಣಿಸಿದೆ.
ಗ್ರಾಮಸ್ಥರ ಪ್ರಕಾರ ತಾಯಿ ಮತ್ತು ಮಗು ಇಬ್ಬರೂ ಸಾಂಪ್ರದಾಯಿಕ ಹೆರಿಗೆಯ ನಂತರ ಆರೋಗ್ಯವಾಗಿದ್ದಾರೆ.
ಇನ್ನು ಆರೋಗ್ಯ ಕೇಂದ್ರವನ್ನು ಮುಚ್ಚಿದ್ದಕ್ಕಾಗಿ ಗ್ರಾಮಸ್ಥರು ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು ಮತ್ತು ತಕ್ಷಣವೇ ಆರೋಗ್ಯ ಕೇಂದ್ರ 24X7 ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸಿದರು.
ಪತ್ರಿಕೆಯೊಡನೆ ಮಾತನಾಡಿದ ಜಿಲ್ಲಾ ಸಿಇಒ ವಿಕಾಸ್ ಸುರಲ್‌ಕರ್, ಬಲ್ಗನೂರು ಆರೋಗ್ಯ ಕೇಂದ್ರ ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ, ಆದರೆ ಮಹಿಳೆ ಬೆಳಿಗ್ಗೆ 7 ಗಂಟೆಗೆ ಆಸ್ಪತ್ರೆಗೆ ಬಂದಿದ್ದಾರೆ. ಹಾಗಾಗಿ ಆ ಸಮಯದಲ್ಲಿ ಕೇಂದ್ರವಿನ್ನೂ ಮುಚ್ಚಿತ್ತು. ಆದರೆ ಆ ಬಗ್ಗೆ ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ಮಗು ಮತ್ತು ಮಹಿಳೆಯನ್ನು ಆರೋಗ್ಯವಾಗಿರಿಸಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಿದ್ದೇವೆ." ಎಂದಿದ್ದಾರೆ.
ಮಹಿಳೆ ಹಾಗೂ ಮಗುವನ್ನು ಸಧ್ಯ ಸಿಂಧಗಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳೀದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ