ಜಮಖಂಡಿಯಲ್ಲಿ ಗೋ ಮಾತೆಗೆ ಸೀಮಂತ!

ದೇಶದಲ್ಲಿ ಗೋಹತ್ಯೆ ವ್ಯಾಪಕವಾಗುತ್ತಿರುವ ಸನ್ನಿವೇಶದಲ್ಲಿ ಜಮಖಂಡಿಯ ಟೀಚರ್ಸ್ ಕಾಲೋನಿಯಲ್ಲಿ ಅಪರೂಪ ಎನ್ನುವಂತೆ ಗೋಮಾತೆಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ನಡೆದಿದೆ.
ಜಮಖಂಡಿಯಲ್ಲಿ ಗೋ ಮಾತೆಗೆ ಸೀಮಂತ ನೆರವೇರಿಸಿದ ಜಕಾತಿ ಕುಟುಂಬ
ಜಮಖಂಡಿಯಲ್ಲಿ ಗೋ ಮಾತೆಗೆ ಸೀಮಂತ ನೆರವೇರಿಸಿದ ಜಕಾತಿ ಕುಟುಂಬ

ಬಾಗಲಕೋಟೆ: ದೇಶದಲ್ಲಿ ಗೋಹತ್ಯೆ ವ್ಯಾಪಕವಾಗುತ್ತಿರುವ ಸನ್ನಿವೇಶದಲ್ಲಿ ಜಮಖಂಡಿಯ ಟೀಚರ್ಸ್ ಕಾಲೋನಿಯಲ್ಲಿ ಅಪರೂಪ ಎನ್ನುವಂತೆ ಗೋಮಾತೆಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ನಡೆದಿದೆ.

ಭಾರತೀಯ ಸಂಪ್ರದಾಯದಲ್ಲಿ ಮಹಿಳೆ ಚೊಚ್ಚಲ ಬಸೂರಿ ಆಗಿದ್ದ ವೇಳೆ ತವರು ಮನೆಯವರು ಮತ್ತು ಗಂಡನ ಮನೆಯವರು ಹಾಗೂ ಬಂಧು ಬಳಗ ಸೇರಿ ಸೀಮತ ಕಾರ್ಯಕ್ರಮ ನಡೆಸುವುದು ವಾಡಿಕೆ. 

ಪುರಾಣ, ಇತಿಹಾಸ ಕಾಲದಿಂದಲೂ ಭಾರತೀಯರಲ್ಲಿ ಗೋಮಾತೆಗೆ ಪೂಜ್ಯನೀಯ ಸ್ಥಾನವಿದೆ. ಗೋಮಾತೆಯಲ್ಲಿ 33 ಸಾವಿರ ದೇವತೆಗಳ ವಾಸಿಸುತ್ತಿದ್ದಾರೆ ಎನ್ನುವ ಬಲವಾದ ನಂಬಿಕೆ ಭಾರತೀಯರದ್ದಾಗಿದೆ. ಹಾಗೆ ಗೋವಿನ ಮೊದಲ ಹೆರಿಗೆ ಹಿನ್ನೆಲೆಯಲ್ಲಿ ಜಮಖಂಡಿಯ ಟೀಚರ್ಸ್ ಕಾಲೋನಿಯ ಜಕಾತಿ ಕುಟುಂಬ ಸಂಭ್ರಮದ ಸೀಮಂತ ಕಾರಣ ಮಾಡಿ ಸಂಭ್ರಮಿಸಿದೆ.

ಜಮಖಂಡಿಯ ಶೋಭಾ ಜಕಾತಿ ಅವರು ತಮ್ಮ ಮನೆಯಲ್ಲಿ ಗೋವು ಸಾಕಿದ್ದಾರೆ. ಗೋವನ್ನು ಸಾಕಿದಾಗಿನಿಂದಲೂ ತಮ್ಮ ಮನೆಗೆ ಒಳ್ಳೆಯದಾಗಿದೆ ಎನ್ನುವ ನಂಬಿಕೆ. ಆ ನಂಬಿಕೆ ಹಿನ್ನೆಲೆಯಲ್ಲಿಯೇ ಸಾಕಿದ ಗೋಮಾತೆ ಮೊದಲ ಬಾರಿಗೆ ಗರ್ಭ ಧರಿಸಿದ್ದರಿಂದ ಸಂತಸಗೊಂಡು, ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯೊಬ್ಬರಿಗೆ ಹೇಗೆ ಸೀಮಂತ ಮಾಡುತ್ತಾರೋ ಹಾಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು, ಕಾರ್ಯಕ್ರಮದ ಕಾರ್ಡ್‍ಗಳನ್ನು ಪ್ರಿಂಟ್ ಹಾಕಿಸಿ ಬಂಧು ಬಳಗ ಹಾಗೂ ನೆರೆಹೊರೆಯವರನ್ನು ಸೇರಿಸಿ ಸೀರೆ ಉಡಿಸಿ, ಆರತಿ ಎತ್ತಿ, ಶೋಭಾನೆ ಪದ ಹಾಡುವ ಮೂಲಕ ಗೋಮಾತೆಗೆ ಸೀಮಂತ ಮಾಡಿದ್ದಾರೆ. ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಮಾಡಿದ್ದರು. ಜಕಾತಿ ಕುಟುಂಬದ ಈ ಅಪರೂಪದ ಕಾರ್ಯಕ್ರಮಕ್ಕೆ ಜನತೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ದೇಶದಲ್ಲಿಂದು ಗೋವುಗಳ ರಕ್ಷಣೆಗಾಗಿ ಎಷ್ಟೆಲ್ಲ ಹೋರಾಟಗಳು ನಡೆಯುತ್ತಿರುವಾಗ ಇಂತಹ ಮಾದರಿ ಕಾರ್ಯಕ್ರಮ ನಡೆದದ್ದು ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಇಂತಹ ಕಾರ್ಯಕ್ರಮಗಳನ್ನು ನೋಡಿಯಾದರೂ ಗೋ ಸಂತತಿ ರಕ್ಷಣೆಗೆ ಮುಂದಾಗಬೇಕಿದೆ. ಇದೊಂದು ಮಾದರಿ ಕಾರ್ಯಕ್ರಮ ಎನ್ನುವ ಹಾರೈಕೆಗೆ ಸೀಮಂತ ಪಾತ್ರವಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com