ದೀಪಾವಳಿಗೆ ಖಾಸಗಿ ಬಸ್‍ಗಳ ದುಬಾರಿ ಶುಲ್ಕ: ಬಿಎಸ್ ವೈ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕ
ಕಾರವಾರ: ಹಬ್ಬ ಅಥವಾ ಸಾಲು ಸಾಲು ರಜಾ ದಿನಗಳಲ್ಲಿ ಖಾಸಗಿ ಬಸ್‍ಗಳ ದುಬಾರಿ ಪ್ರಯಾಣ ದರದಿಂದ ಕಂಗೆಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರೊಬ್ಬರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಟಿಕೆಟ್ ಖರೀದಿಸಿ, ಅವರನ್ನು ಹಬ್ಬಕ್ಕೆ ಆಹ್ವಾನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ನಿವಾಸಿ ರಾಜೇಶ್ ಶೇಟ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ದುಬಾರಿ ಖಾಸಗಿ ಬಸ್ ಟಿಕೆಟ್ ಕಾಯ್ದಿರಿಸಿ, ಹಬ್ಬಕ್ಕೆ ಆಹ್ವಾನ ನೀಡಿದ್ದಾರೆ.
‘ಪ್ರೀತಿಯ ಯಡಿಯೂರಪ್ಪನವರಿಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಗುಂಡಬಾಳಕ್ಕೆ ಸ್ವಾಗತ. ಇದು ದೀಪಾವಳಿ ಹಬ್ಬಕ್ಕೆ ನಿಮಗೆ ಆಮಂತ್ರಣ. ದುಬಾರಿ ಬೆಲೆಯ ಖಾಸಗಿ ಬಸ್ ಟಿಕೆಟ್ ನಿಮಗಾಗಿ..’ ಎಂದು ಪತ್ರ ಬರೆದು ಆ ಪತ್ರವನ್ನು ಮತ್ತು ಎಸ್‍ಎಸ್‍ಆರ್ ಎಸ್ ಟ್ರಾವೆಲ್ಸ್ ನಲ್ಲಿ 1,580 ರೂ.ಗೆ ಖರೀದಿಸಿದ ಟಿಕೆಟ್ ಅನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಯವರಿಗೆ ಅದನ್ನು ಟ್ಯಾಗ್ ಮಾಡಿದ್ದಾರೆ.
ಖಾಸಗಿ ಬಸ್‍ಗಳ ಟಿಕೆಟ್ ದರವು ಸಾಮಾನ್ಯ ದಿನದಲ್ಲಿ 700 ರೂ.ದಿಂದ 800 ರೂಪಾಯಿ ಇರುತ್ತದೆ. ಆದರೆ ಹಬ್ಬ ಹರಿದಿನಗಳಲ್ಲಿ 1,500 ರೂ.ದಿಂದ 2,500 ರೂ.ಗೂ ಅಧಿಕ ದರವಾಗುತ್ತದೆ. ಇದರಿಂದಾಗಿ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದ್ದು, ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಬರಬೇಕೆಂದರೆ ಒಬ್ಬರು ಕನಿಷ್ಠ 5,000 ರೂ. ತೆಗೆದಿಡಬೇಕು. ಕುಟುಂಬ ಸಮೇತ ಬರಬೇಕು ಎಂದರೆ ಬರುವ ವೇತನವನ್ನು ಟಿಕೆಟ್‍ಗೆ ಮೀಸಲಿಡಬೇಕಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ