ಉದ್ಯೋಗಾಧಾರಿತ ಶಿಕ್ಷಣ ವ್ಯವಸ್ಥೆ ನಿರ್ಮಾಣಕ್ಕೆ ಚಿಂತನೆ: ಸಿಎಂ ಯಡಿಯೂರಪ್ಪ

ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದ್ದು, ಉದ್ಯೋಗಾಧಾರಿತ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ
Updated on

ಬೆಂಗಳೂರು: ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದ್ದು, ಉದ್ಯೋಗಾಧಾರಿತ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿಂದು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಸಮಾಜದ ಹಿತ ಕಾಪಾಡುವಂತದ್ದು. ಶಿಕ್ಷಕರ ಜೊತೆಗೆ ಸರ್ಕಾರ ಸದಾ ಇರುತ್ತದೆ. ಒಬ್ಬರ ಜೀವನ ಬದಲಿಸುವ ಸಾಧನ ಶಿಕ್ಷಕ ವೃತ್ತಿಯಾಗಿದ್ದು, ಹಾಗಾಗಿ ಶಿಕ್ಷಕರು ಉತ್ತಮವಾಗಿ ಕೆಲಸ ಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಸಮಾಜವನ್ನು ಗುಣಾತ್ಮಕವಾಗಿ ರೂಪಿಸುವವರನ್ನು ನಾವು ನೆನೆಯಬೇಕು. ಅಂತವರಲ್ಲಿ ಶಿಕ್ಷಕರೂ ಒಬ್ಬರು. ಸರ್ವಪಲ್ಲಿ ರಾಧಾಕೃಷ್ಣರ ನೆನಪಿನಲ್ಲಿ ಈ ದಿನಾಚರಣೆ ಆಚರಿಸಲಾಗುತ್ತಿದೆ. ರಾಧಾಕೃಷ್ಣರ ಬದ್ಧತೆಯನ್ನು ಶಿಕ್ಷಕರೂ ರೂಢಿಸಿಕೊಳ್ಳಬೇಕು. ಶಿಕ್ಷಕರ ದಿನಾಚರಣೆ ಕೇವಲ ಕೃತಜ್ಞತೆಗಲ್ಲ‌, ಇದು ಮೌಲ್ಯ ಬಿತ್ತುವ ದಿನ, ಆದ್ದರಿಂದ ನಾಡಿಗೆ ಮಾದರಿ ಶಿಕ್ಷಣ ವ್ಯವಸ್ಥೆ ರೂಪಿಸುವುದು ನಿಮ್ಮ ಕರ್ತವ್ಯ, ವರ್ತಮಾನ, ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಶ್ರಮಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ನ್ಯಾಯ, ನೈತಿಕತೆ, ಜ್ಞಾನ, ಮೌಲ್ಯ ತುಂಬುವ ಹೊಣೆ ಶಿಕ್ಷಕರದ್ದು. ಉನ್ನತ ಶಿಕ್ಷಣದಲ್ಲಿ ದಾಖಲಾತಿ‌ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಶೇ. 25ರಷ್ಟು ಇದ್ದರೆ, ಕರ್ನಾಟಕದಲ್ಲಿ ಶೇ. 27.8 ಇದೆ. 2040ರ ವೇಳೆಗೆ ಇದು ಶೇಕಡಾ 48 ರಷ್ಟು ಆಗಬೇಕು. ರಾಷ್ಟ್ರದ ಭವಿಷ್ಯ ನಿರ್ಮಾಣಕ್ಕೆ ನಿಮ್ಮ ಅಗತ್ಯ ಇದೆ. ಸಮಾಜದ ಸ್ವಾಸ್ತ್ಯ ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದರು.

ನೆರೆ ಸಂತ್ರಸ್ತರಿಗೆ ಒಂದು ದಿನದ ಸಂಬಳ ನೀಡಿ ಶಿಕ್ಷಕರು ಸಹಾಯ ಹಸ್ತ ಚಾಚಿದ್ದಾರೆ. ಶಿಕ್ಷಕರು ಒಟ್ಟು 100 ಕೋಟಿ ರೂ.‌ಹಣ ನೀಡಿ ಮಾದರಿಯಾಗಿದ್ದಾರೆ. ನಿಮ್ಮ ಕರ್ತವ್ಯ ಪ್ರಜ್ಞೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಚಿವರಾದ ಅಶ್ವಥನಾರಾಯಣ, ಸುರೇಶ್ ಕುಮಾರ್ ಅಂಥ ಒಳ್ಳೆಯವರನ್ನು ಶಿಕ್ಷಣ ಇಲಾಖೆಗಳಿಗೆ ನೇಮಿಸಿ ಉತ್ತಮ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರಾಥಮಿಕ‌ ಮತ್ತು ಉನ್ನತ ಶಿಕ್ಷಣ ಇಲಾಖೆಗಳು ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಕೂಪಗಳಾಗಿದ್ದವು. ಮೈತ್ರಿ ಅವಧಿಯಲ್ಲಿ ಜಾತೀಯತೆ, ವರ್ಗಾವಣೆ ದಂಧೆ ಅವ್ಯಾಹತವಾಗಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿ ತಾಂಡವವಾಡುತ್ತಿತ್ತು. ಕಳೆದ ಒಂದು ವರ್ಷದಿಂದ ನಾನು ಮಾತಾಡದೇ ಸುಮ್ಮನಿದ್ದೆ. ನಮಗೆ ಮೈತ್ರಿ ಕಾಲದಲ್ಲಿ ಮಾತಾಡಲು ಅವಕಾಶ ಇರಲಿಲ್ಲ. ಈಗ ಸರ್ಕಾರ ಬದಲಾಗಿರುವುದು ಸಂತೋಷ ತಂದಿದೆ. ಉತ್ತಮವಾದವರನ್ನೇ ಎರಡೂ ಇಲಾಖೆಗಳಿಗೂ ಸಚಿವರಾಗಿ ನೇಮಕ ಮಾಡಿದ್ದಾರೆ. ಇನ್ನು ಮುಂದೆ ಈ ಎರಡೂ ಇಲಾಖೆಗಳೂ ಭ್ರಷ್ಟಾಚಾರ ಮುಕ್ತ ಇಲಾಖೆ ಆಗುವ ವಿಶ್ವಾಸ ಇದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಪುಟ್ಟಣ್ಣ ತಮ್ಮ ಭಾಷಣದುದ್ದಕ್ಕೂ ಆರೋಪಗಳ ಸುರಿಮಳೆಗೈದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com