ಸಂಚಾರಿ ನಿಮಯ ಉಲ್ಲಂಘನೆ; ಹೆಚ್ಚುವರಿ ದಂಡ ನಾಳೆ ಸಂಜೆಯೊಳಗೆ ತಗ್ಗಿಸಲು ಕ್ರಮ: ಲಕ್ಷ್ಮಣ ಸವದಿ

ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸಲಾಗುತ್ತಿರುವ ದಂಡದ ಪ್ರಮಾಣವನ್ನು ಬುಧವಾರ ಸಂಜೆಯೊಳಗಾಗಿ ಕಡಿಮೆ ಮಾಡುವುದಾಗಿ ಸಾರಿಗೆ ಇಲಾಖೆ ಜವಾಬ್ದಾರಿ.....
ಲಕ್ಷ್ಮಣ್ ಸವದಿ
ಲಕ್ಷ್ಮಣ್ ಸವದಿ
Updated on

ಬಳ್ಳಾರಿ: ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸಲಾಗುತ್ತಿರುವ ದಂಡದ ಪ್ರಮಾಣವನ್ನು ಬುಧವಾರ ಸಂಜೆಯೊಳಗಾಗಿ ಕಡಿಮೆ ಮಾಡುವುದಾಗಿ ಸಾರಿಗೆ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿಂದು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಪ್ರಕಾರ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ವಿಧಿಸಲಾಗುತ್ತಿರುವ ದಂಡದ ಪ್ರಮಾಣ ಹೆಚ್ಚಾಗಿದೆ ಎಂಬ ಆರೋಪ ಸಾರ್ವತ್ರಿಕವಾಗಿದೆ. ಹೀಗಾಗಿ ಪ್ರಸ್ತುತ ಜಾರಿಯಲ್ಲಿರುವ ದಂಡದ ಪ್ರಮಾಣ ಕಡಿಮೆ ಮಾಡುವ ಸಂಬಂಧ ನಾಳೆ ಸಂಜೆಯೊಳಗಾಗಿ ವಾಹನ ಸವಾರರಿಗೆ ಒಳ್ಳೆಯ ಸುದ್ದಿ ಹೊರ ಬೀಳಲಿದೆ ಎಂದು ಹೇಳಿದರು.

ದಂಡದ ಪ್ರಮಾಣ ತಗ್ಗಿಸುವ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ವಿಧಿಸಬೇಕು ಎನ್ನುವ ಪಟ್ಟಿಯನ್ನೂ ಸಹ ಸಿದ್ಧಪಡಿಸಲಾಗಿದೆ. ಇದಕ್ಕೆ ಆದೇಶದ ಸ್ವರೂಪ ನೀಡುವುದು ಮಾತ್ರ ಬಾಕಿ ಇದೆ ಎಂದರು. 

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಕಲ್ಯಾಣ ಕರ್ನಾಟಕ ಮಹತ್ವದ ಕೊಡುಗೆ ನೀಡಿದೆ. ವಿಶ್ವವೇ ನಿಬ್ಬೆರಗಾಗುವಂತಹ ಜಗಜ್ಯೊತಿ ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಬುನಾದಿ ಹಾಕಿದ ಪವಿತ್ರ ಭೂಮಿ ಇದು ಎಂದು ಉಪ ಮುಖ್ಯಮಂತ್ರಿ ಬಣ್ಣಿಸಿದ್ದಾರೆ.

ಬ್ರಿಟೀಷರ ಕುಮ್ಮಕ್ಕುನಿಂದ ಹೈದರಾಬಾದ್ ಪ್ರಾಂತ್ಯವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರು, ಭಾರತಕ್ಕೆ ಅಧಿಕೃತವಾಗಿ ಸ್ವಾತಂತ್ರ್ಯ ದೊರಕಿದರೂ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದರು. ರಜಾಕರ ಆಡಳಿತ ಪ್ರದೇಶವನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರು ದಿಟ್ಟತನದಿಂದ ಸೇನಾ ಕಾರ್ಯಾಚರಣೆ ಕೈಗೊಂಡರು. ಇದರ ಪರಿಣಾಮ ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದರು. 1948 ಸೆಪ್ಟೆಂಬರ್ 17ರಂದು ಈ ಭಾಗಗಳು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಯಿತು ಎಂದು ಇತಿಹಾಸವನ್ನು ಸ್ಮರಿಸಿದರು.

ದೇಶಕ್ಕೆ 1947ರ ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಹೈದ್ರಾಬಾದ್ ನಿಜಾಮರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ರಾಜ್ಯ ಮಾಡಲು ಪ್ರಯತ್ನಿಸಿದ್ದರು. ಇದಕ್ಕೆ ಅಂತಾರಾಷ್ಟ್ರೀಯ ನೆರವನ್ನು ಸಹ ಪಡೆದಿದ್ದರು. ಮೀರ್ ಉಸ್ಮಾನ್ ಅಲಿಖಾನ್ ಅಂದಿನ ಕೊನೆಯ ನಿಜಾಮನಾಗಿದ್ದನು ಎಂದರು.

ಈ ಮಧ್ಯೆ ಸಂಸ್ಥಾನದಲ್ಲಿ ಸಾಮ್ರಾಜ್ಯ ಶಾಹಿ ಆಡಳಿತ ನಡೆದು ಪ್ರಜೆಗಳಿಗೆ ಹಿಂಸೆ ನೀಡಲಾಗುತ್ತಿತ್ತು. ದಂಗೆಕೋರರು ಪ್ರಜೆಗಳ ಸುಲಿಗೆ ಮಾಡಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ಜನರ ಪಾಲಿಗೆ ಇರಲಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ಷೋಭೆ ಉಂಟಾಯಿತು. ಕಲಬುರಗಿ ಆರ್ಯ ಸಮಾಜ ಚಳುವಳಿ ಹಾಗೂ ಮತ್ತಿತರ ಸಂಸ್ಥೆಗಳು ಹೋರಾಟಕ್ಕೆ ಇಳಿದವು. ತುಂಗಭದ್ರಾ ನದಿ ಪ್ರದೇಶದ ಬಳ್ಳಾರಿ ಜಿಲ್ಲೆಯ ಗ್ರಾಮಗಳ ಜನತೆ ದಂಗೆ ಕೋರರಿಂದ ಹಿಂಸೆಗೊಳಗಾದವರಿಗೆ ರಕ್ಷಣೆ ಸಹಾಯ ಹಸ್ತ ನೀಡಿದ್ದರು. ಇದನ್ನು ನಾವೆಲ್ಲ ಸ್ಮರಿಸಬೇಕಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com