ಗದಗ: ಸ್ಮಶಾನ ಇಲ್ಲವೆಂದು ಮೃತದೇಹವನ್ನು ತಹಶಿಲ್ದಾರ್ ಕಚೇರಿಗೆ ಕೊಂಡೊಯ್ದ ಗ್ರಾಮಸ್ಥರು!

ಹಲವು ಗ್ರಾಮಗಳಲ್ಲಿ ಹಲವು ಸಮಸ್ಯೆಗಳಿರುತ್ತವೆ. ರಸ್ತೆ, ಆಸ್ಪತ್ರೆ, ಶಾಲೆ, ಮೂಲಭೂತ ಸೌಕರ್ಯ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳಿರುತ್ತವೆ.  ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹರಿಪುರ ಗ್ರಾಮದ ಜನತೆಯದ್ದು ಬೇರೆಯದ್ದೇ ಸಮಸ್ಯೆ. ಯಾರಾದರು ಸತ್ತರೆ ಸುಡಲು ಅಥವಾ ಹೂಳಲು ಎರಡಡಿ ಜಾಗವೇ ಇಲ್ಲ. 
ತಹಶಿಲ್ದಾರ್ ಕಚೇರಿಯ ಹೊರಗೆ ಮೃತದೇಹವನ್ನು ಇಟ್ಟ ಗ್ರಾಮಸ್ಥರು
ತಹಶಿಲ್ದಾರ್ ಕಚೇರಿಯ ಹೊರಗೆ ಮೃತದೇಹವನ್ನು ಇಟ್ಟ ಗ್ರಾಮಸ್ಥರು
Updated on

ಗದಗ: ಹಲವು ಗ್ರಾಮಗಳಲ್ಲಿ ಹಲವು ಸಮಸ್ಯೆಗಳಿರುತ್ತವೆ. ರಸ್ತೆ, ಆಸ್ಪತ್ರೆ, ಶಾಲೆ, ಮೂಲಭೂತ ಸೌಕರ್ಯ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳಿರುತ್ತವೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹರಿಪುರ ಗ್ರಾಮದ ಜನತೆಯದ್ದು ಬೇರೆಯದ್ದೇ ಸಮಸ್ಯೆ. ಯಾರಾದರು ಸತ್ತರೆ ಸುಡಲು ಅಥವಾ ಹೂಳಲು ಎರಡಡಿ ಜಾಗವೇ ಇಲ್ಲ. ಈ ಬಗ್ಗೆ ಇಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ, ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. 


ಯಾರ ಕಾಯುವಿಕೆಗೂ ತಾಳ್ಮೆ ಎನ್ನುವುದೊಂದಿರುತ್ತದೆಯಲ್ಲವೇ?, ಗ್ರಾಮಸ್ಥರ ತಾಳ್ಮೆ ಕಟ್ಟೆಯೊಡೆದು ಮೊನ್ನೆ ಸೋಮವಾರ ಕುಪಿತಗೊಂಡ ಗ್ರಾಮಸ್ಥರು ಮೃತದೇಹವನ್ನು ತಾಲ್ಲೂಕಿನ ತಹಶಿಲ್ದಾರ್ ಕಚೇರಿಗೆ ತೆಗೆದುಕೊಂಡು ಹೋದರು. ಶವವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಆರಂಭಿಸಿ ತಮ್ಮ ಸಮಸ್ಯೆ ಇತ್ಯರ್ಥವಾಗುವವರೆಗೆ ಮೃತದೇಹವನ್ನು ಒಂದಿಂಚೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಕುಳಿತರು. ತಹಶಿಲ್ದಾರ್ ಕಚೇರಿಯೊಳಗೆ ವ್ಯಕ್ತಿಯ ಮೃತದೇಹವನ್ನು ನೋಡಿದ ಅಧಿಕಾರಿಗಳಿಗೆ ಆಘಾತವಾಗಿದ್ದಂತೂ ಸತ್ಯ.


ಶಿರಹಟ್ಟಿ ತಹಶಿಲ್ದಾರ್ ಯಲ್ಲಪ್ಪ ಗೊನೆಣ್ಣವರ್ ಎಲ್ಲಿಯೋ ಹೊರಗಡೆ ಕೆಲಸದ ಮೇಲೆ ಹೋಗಿದ್ದವರು ಪ್ರತಿಭಟನೆಯ ಸುದ್ದಿ ಕೇಳುತ್ತಲೇ ತಕ್ಷಣ ಓಡಿಬಂದಿದ್ದಾರೆ. ಗ್ರಾಮಸ್ಥರ ಮನವೊಲಿಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಆಗ ಗ್ರಾಮಸ್ಥರು ಸಮಾಧಾನಗೊಂಡು ಶವವನ್ನು ತೆಗೆದುಕೊಂಡು ಹೋಗಿ ಹರಿಪುರ ಹತ್ತಿರ ಮೈದಾನದಲ್ಲಿ ಸುಟ್ಟಿದ್ದಾರೆ. ಈ ಘಟನೆ ನಡೆದಿದ್ದು ಮೊನ್ನೆ ಸೋಮವಾರ, ಸುದ್ದಿಯಾಗಿದ್ದು ಗದಗ ಜಿಲ್ಲಾಧಿಕಾರಿ  ಗಮನಕ್ಕೆ ನಿನ್ನೆ ಬಂದಾಗಲೇ.


2007ರಲ್ಲಿ ಈ ಗ್ರಾಮಕ್ಕೆ ಅಧಿಕಾರಿಗಳು ಬಂದು ಸ್ಮಶಾನಕ್ಕೆಂದು ಕೆಲ ಜಾಗಗಳನ್ನು ಪತ್ತೆಹಚ್ಚಿ ಗ್ರಾಮಸ್ಥರಿಗೆ ಪ್ರಸ್ತಾವನೆ ಕಳುಹಿಸುವಂತೆ ಹೇಳಿದ್ದರು. ಮತ್ತೆ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿದ್ದು 2012ರಲ್ಲಿ, ಆಗಲೂ ಕೆಲವು ಸ್ಥಳಗಳನ್ನು ಗುರುತಿಸಿದರು. ಆದರೆ ಈಗ ಅಲ್ಲಿ ಸ್ಮಶಾನಕ್ಕೆ ಸ್ಥಳವೇ ಇಲ್ಲದಂತಾಗಿದೆ. 


ಕೆಲ ವರ್ಷಗಳ ಹಿಂದೆ ಸ್ಮಶಾನಕ್ಕೆಂದು ಸ್ಥಳ ಗುರುತಿಸಿಹೋದ ಅಧಿಕಾರಿಗಳು ಮತ್ತೆ ಬರಲಿಲ್ಲ. ಈಗ ಸ್ಮಶಾನಕ್ಕೆಂದು ಗುರುತಿಸಿದ ಜಾಗವನ್ನು ನೀಡಲು ಭೂಮಿಯ ಮಾಲೀಕ ಒಪ್ಪುತ್ತಿಲ್ಲ. ಇನ್ನು ನಾವು ರಸ್ತೆಬದಿಗಳಲ್ಲಿ ಯಾವುದಾದರೂ ಜಾಗ ಸ್ಮಶಾನಕ್ಕೆ ಹುಡುಕಿಕೊಳ್ಳಬೇಕಷ್ಟೆ ಎನ್ನುತ್ತಾರೆ ಗ್ರಾಮಸ್ಥ ಮಹದೇವ ಗಾಣಿಗರ್.


ಶಿರಹಟ್ಟಿ ತಾಲ್ಲೂಕಿನ ತಹಶಿಲ್ದಾರ್ ಯೆಲ್ಲಪ್ಪ ಗೊಣೆನ್ನವರ್, ಗ್ರಾಮದಲ್ಲಿ ಸಮಸ್ಯೆ ಇರುವುದು ನಿಜ. ಯಾರೂ ಕೂಡ ಸ್ಮಶಾನಕ್ಕೆ ಜಾಗಗಳನ್ನು ಕೊಡಲು ಸಿದ್ದರಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ವಾರದೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಗದಗ ಜಿಲ್ಲಾಧಿಕಾರಿ ಎಂ ಜಿ ಹೀರೇಮಠ, ಈ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚಿಸಿ ಸದ್ಯದಲ್ಲಿಯೇ ಪರಿಹಾರ ಹುಡುಕುತ್ತೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com