ರಾಜ್ಯದ ಪ್ರವಾಹ ಸ್ಥಿತಿ: ಸಂತ್ರಸ್ಥ ರೈತರ ಸಾಲಮನ್ನಾ ಬಗ್ಗೆ ಸರ್ಕಾರ ಚಿಂತನೆ-ಸಚಿವ ಶೆಟ್ಟರ್

ನೆರೆ ಹಾಗು ಅತಿವೃಷ್ಠಿಯಿಂದ ಬೆಳೆಹಾನಿಯಾಗಿರುವ ರೈತರ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ರೈತರ ಬೆಳೆ ಸಾಲಮನ್ನಾ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ರೈತರಿಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್
Updated on

ಬೆಳಗಾವಿ: ನೆರೆ ಹಾಗು ಅತಿವೃಷ್ಠಿಯಿಂದ ಬೆಳೆಹಾನಿಯಾಗಿರುವ ರೈತರ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ರೈತರ ಬೆಳೆ ಸಾಲಮನ್ನಾ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ರೈತರಿಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು ಹಾಗೂ ಮುಖಂಡರುಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಆರಂಭಿಸಲು ತಕ್ಷಣವೇ ಒಂದು ಲಕ್ಷ ರೂಪಾಯಿ ಬಿಡುಗಡೆಗೆ ಸಚಿವ ಸಂಪುಟ ಸಭೆ ನಿರ್ಧರಿಸಿದ್ದು, ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆಗೆ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಗದೀಶ್ ಶೆಟ್ಟರ್ ತಿಳಿಸಿದರು.

ಬೆಳೆಹಾನಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ರಾಷ್ಟ್ರೀಯ ವಿಪತ್ತು ಮಾರ್ಗಸೂಚಿಯನ್ವಯ ಜತೆಗೆ ರಾಜ್ಯ ಸರ್ಕಾರ ಕೂಡ ವಿಶೇಷ ಪರಿಹಾರ ನೀಡಲಿದೆ.ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು,ಶೀಘ್ರವೇ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಯನ್ನು ಮಾಡಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ಥ ಪ್ರದೇಶಗಳಲ್ಲಿ ಆಸ್ತಿ ಹಾಗೂ ಬೆಳೆ ಹಾನಿಯನ್ನು ಸರಿಪಡಿಸಿ ಸಹಜ ಸ್ಥಿತಿಗೆ ತರುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ.ಹಾನಿಯ ಗಂಭೀರತೆಯನ್ನು ಅರಿತು ತಕ್ಷಣವೇ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ಪರಿಹಾರ ನೀಡಲಾಗಿದೆ.ಸಮೀಕ್ಷೆ ಮತ್ತು ತಾಂತ್ರಿಕ ಲೋಪದೋಷಗಳಿಂದ ಪರಿಹಾರದಿಂದ ವಂಚಿತಗೊಂಡ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು.ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಮಾರ್ಗಸೂಚಿಯ ಪ್ರಕಾರ ಕಡಿಮೆ ಪರಿಹಾರ ಆಗುವುದರಿಂದ ಸರ್ಕಾರ ಹೆಚ್ಚಿನ ಪರಿಹಾರವನ್ನು ಮೊಟ್ಟಮೊದಲ ಬಾರಿಗೆ ಘೋಷಿಸಿದೆಎಂದರು.

ಬೆಳಗಾವಿ ಜಿಲ್ಲೆಗೆ ತಕ್ಷಣ ಎರಡು ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ರಾಜ್ಯದ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಐದು ನೂರು ಕೋಟಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಯಾವುದೇ ರೀತಿಯ ಹಣಕಾಸಿನ ತೊಂದರೆಯಾಗದಂತೆ ಸರ್ಕಾರ ಕ್ರಮ ವಹಿಸಿದೆ ಎಂದು ಶೆಟ್ಟರ್ ವಿವರಿಸಿದರು.

ಪರಿಹಾರ ಕೆಲಸಕಾರ್ಯಗಳು ನಡೆಯುತ್ತಿರುವುದರಿಂದ ಅನಿವಾರ್ಯ ಕಾರಣಗಳಿಂದಾಗಿ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿಲ್ಲ.ರೈತರು ಹಾಗೂ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ತುರ್ತಾಗಿ ಭೇಟಿ ನೀಡಿದ್ದೇನೆ.ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸುವುದಾಗಿ ತಿಳಿಸಿದರು.ಪ್ರವಾಹ ಸಂದರ್ಭದಲ್ಲಿ ತುರ್ತು ರಕ್ಷಣಾ ಕಾರ್ಯ ಕೈಗೊಂಡಿರುವ ಜಿಲ್ಲಾಡಳಿತದ ಕಾರ್ಯವನ್ನು ಸಚಿವ ಜಗದೀಶ್ ಶೆಟ್ಟರ್ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

ಸಭೆಯಲ್ಲಿ ಮಾತನಾಡಿದ ಸವದತ್ತಿ ಶಾಸಕ ಆನಂದ ಮಾಮನಿ, ಆದಷ್ಟು ಬೇಗನೇ ಬೆಳೆಹಾನಿ ಸಮೀಕ್ಷೆ ನಡೆಸಬೇಕು.ಅದೇ ರೀತಿ ಸಮೀಕ್ಷೆ ಬಳಿಕ ಮತ್ತಷ್ಟು ಮನೆಗಳು ಕುಸಿದಿದ್ದು, ಇದರ ಬಗ್ಗೆ ಮರು ಸಮೀಕ್ಷೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಿಂಗಾರು ಹಂಗಾಮು ಆರಂಭಗೊಳ್ಳುತ್ತಿರುವುದರಿಂದ ಕೂಡಲೇ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಹಾನಿಯ ಸಮೀಕ್ಷೆ ತುರ್ತಾಗಿ ನಡೆಸಬೇಕು.ನೇಕಾರರು ತೀವ್ರ ಸಂಕಷ್ಟದಲ್ಲಿದ್ದು, ಸೂಕ್ತ ಪರಿಹಾರ ವಿತರಣೆ ನೀಡಬೇಕು ಎಂದು ಅವರು ಸಚಿವರಿಗೆ ಮನವಿ ಮಾಡಿದರು.

ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಮಾತನಾಡಿ, ಶೇ.50 ರಷ್ಟು ಮನೆ ಹಾನಿಯಾಗಿರುವ ಪ್ರಕರಣಗಳಲ್ಲಿ ಸಂಪೂರ್ಣ ಹಾನಿ ಎಂದು ಪರಿಗಣಿಸಬೇಕು ಮತ್ತು ಪರಿಹಾರ ಕೇಂದ್ರದ ಬದಲು ಸಂಬಂಧಿಕರ ಮನೆಗಳಲ್ಲಿ ರಕ್ಷಣೆ ಪಡೆದಿದ್ದ ಕುಟುಂಬಗಳಿಗೂ ಹತ್ತು ಸಾವಿರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ಮಾತನಾಡಿ, ಸಂತ್ರಸ್ತರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ ಹತ್ತು ಸಾವಿರ ಕೋಟಿ ಹಾನಿಯಾಗಿದ್ದು,ಇದುವರೆಗೆ 167 ಕೋಟಿ ರೂ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com