ಸ್ಮಾರಕ ಏರಲು ಅನುಮತಿ ನಿರಾಕರಣೆ: ಭದ್ರತಾ ಸಿಬ್ಬಂದಿ ಮೇಲೆ ಚೀನೀ ಪ್ರವಾಸಿಗನಿಂದ ಹಲ್ಲೆ
ಹಂಪಿ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿನ ಸ್ಮಾರಕ ಏರಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ಚೀನಾದ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಧರ್ಮಣ್ಣ ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ.ಲೋಟಸ್ ಮಹಲ್ ಏರಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಚೈನಾದ ದಿಂಗ್ ಕಾಯ್ ಧರ್ಮಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಡಿವೈಎಸ್ಪಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.
ಲೋಟಸ್ ಮಹಲ್ ಏರಲು ಅನುಮತಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ದಿಂಗ್ ಕಾಯ್ , ಭದ್ರತಾ ಸಿಬ್ಬಂದಿಯಿಂದ ಗನ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯ ತಲೆಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಹಂಪಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು,ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಹಂಪಿಯಲ್ಲಿ ಇತ್ತೀಚಿಗೆ ನಡೆದಿರುವ ಎರಡನೇ ಘಟನೆಯಾಗಿದೆ.
ವಾರದ ಹಿಂದಷ್ಟೇ ವಿಜಯವಿಠಲ ದೇವಾಲಯದಲ್ಲಿ ಸಾಲು ಮಂಟಪ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದರು. ಈ ವರ್ಷದ ಪ್ರಾರಂಭದಲ್ಲಿ ಕೆಲ ಕಿಡಿಗೇಡಿಗಳು ವಿಷ್ಣು ದೇವಾಲಯದಲ್ಲಿನ ಅನೇಕ ಫಿಲ್ಲರ್ ಗಳನ್ನು ಧ್ವಂಸಗೊಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ