ವಿವಾದಕ್ಕೆ ಎಡೆಮಾಡಿದ ಮಹಿಷ ದಸರಾ; ಚಾಮುಂಡಿ ಬೆಟ್ಟದಲ್ಲಿ ಕಾರ್ಯಕ್ರಮ ರದ್ದು
ಮೈಸೂರು: ಪ್ರಗತಿಪರ, ದಲಿತ ಸಂಘಟನೆಗಳು ಮತ್ತು ಬುದ್ದಿಜೀವಿಗಳು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಚರಿಸಲುದ್ದೇಶಿಸಿದ್ದ ಮಹಿಷ ದಸರಾ ತೀವ್ರ ವಿವಾದಕ್ಕೆ ಕಾರಣವಾಗಿ ಜಿಲ್ಲಾಡಳಿತ ಚಾಮುಂಡಿ ಬೆಟ್ಟ ಮತ್ತು ಟೌನ್ ಹಾಲ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಅಲ್ಲಿ ಕಾರ್ಯಕ್ರಮ ರದ್ದುಮಾಡಿದೆ.
ಇದರಿಂದಾಗಿ ಮೈಸೂರು ದಸರಾ ಆಯೋಜಕರು ಕಾರ್ಯಕ್ರಮ ಸ್ಥಳವನ್ನು ಅಶೋಕಪುರದ ಅಂಬೇಡ್ಕರ್ ಪಾರ್ಕ್ ಗೆ ವರ್ಗಾಯಿಸಲಾಗಿದ್ದು ಇಲ್ಲಿ ಸಾಹಿತಿಗಳು ಮತ್ತು ಇತರರಿಗೆ ಮಹಿಷಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಯೋಜನೆಗೆ ವಿರೋಧ ವ್ಯಕ್ತವಾದಾಗ ಸಂಘಟಕರು ಪ್ರತಿಭಟನೆ ನಡೆಸಿ ಬಿಜೆಪಿ ನೇತೃತ್ವದ ಸರ್ಕಾರ ತನ್ನಿಷ್ಟದಂತೆ ವರ್ತಿಸುತ್ತಿದ್ದು ಜನರ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುತ್ತಿದೆ. ಸರ್ಕಾರ ದ್ರಾವಿಡ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ನಡೆದುಕೊಳ್ಳುತ್ತಿದೆ, ಅದರ ಪ್ರಕಾರ ಚಾಮುಂಡಿ ಬೆಟ್ಟ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸ್ಥಳೀಯರು ಮಹಿಷ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ