ಮದ್ಯಪಾನ ಮಾಡಿ ವಾಹನ ಚಾಲನೆ ಮೇಲಿನ ದಂಡದ ಮೊತ್ತ ಕಡಿಮೆ ಮಾಡಿ: ಹೊಟೇಲ್ ಮಾಲೀಕರ ಸಂಘ ಒತ್ತಾಯ

ರಾಜ್ಯದ ಪ್ರವಾಸೋದ್ಯಮ ನೀತಿ 2020ಕ್ಕೆ ಮುಗಿಯಲಿದ್ದು, 2020 - 2025ರ ಅವಧಿಯ ಪ್ರವಾಸೋದ್ಯಮ ನೀತಿಯಲ್ಲಿ ಪ್ರವಾಸಿಗರು ಮತ್ತು ಪ್ರವಾಸೋದ್ಯಮ ಹೋಟಲ್ ಉದ್ಯಮಕ್ಕೆ ಸಹಾಯವಾಗುವಂತೆ ಹಣಕಾಸು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ರಾಜ್ಯದ ಪ್ರವಾಸೋದ್ಯಮ ನೀತಿ 2020ಕ್ಕೆ ಮುಗಿಯಲಿದ್ದು, 2020 - 2025ರ ಅವಧಿಯ ಪ್ರವಾಸೋದ್ಯಮ ನೀತಿಯಲ್ಲಿ ಪ್ರವಾಸಿಗರು ಮತ್ತು ಪ್ರವಾಸೋದ್ಯಮ ಹೋಟಲ್ ಉದ್ಯಮಕ್ಕೆ ಸಹಾಯವಾಗುವಂತೆ ಹಣಕಾಸು ಮತ್ತು ಪ್ರೋತ್ಸಾಹ ಧನ ಹೆಚ್ಚಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಉಮೇಳ ಬಾಳಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರ ಆಚರಿಸುವ ಹಬ್ಬ ಹಾಗೂ ಜಯಂತಿಗಳ ಸಂದರ್ಭಗಳಲ್ಲಿ, ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ 25 ರಿಂದ 30 ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ. ಇದರಿಂದ ಹೋಟೆಲ್ ಉದ್ಯಮ ನಷ್ಟ ಅನುಭವಿಸುತ್ತಿದೆ ಎಂದರು.

ರಾಜ್ಯದ ಬಹುತೇಕ ಭಾಗಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು,  ಪ್ರವಾಸಿ ಹೋಟೆಲ್‌ಗಳು ಕೋಟಿ ಕೋಟಿ ಬಂಡವಾಳ ಹೂಡಿ ನಷ್ಟ ಅನುಭವಿಸಬೇಕಾಗಿದೆ. ಉದ್ಯೋಗ ಸೃಷ್ಟಿಸುವ ಹೋಟೆಲ್ ಉದ್ಯಮವನ್ನು ಗಮನಿಸಿ ರಾಜ್ಯ ಸರಕಾರ ಕೆಲ ರಿಯಾಯಿತಿಗಳನ್ನು ಘೋಷಿಸಿ, ಸಹಾಯದ ಹಸ್ತ ಚಾಚಬೇಕು ಎಂದರು.

ಜಿಲ್ಲೆಯ ಚಿಲ್ಲರೆ ಅಂಗಡಿಗಳು ನಿಯಮ ಮೀರಿ ಅಂಗಡಿಗಳಲ್ಲಿ ಸೇವೆ ಒದಗಿಸುತ್ತಿವೆ. ಬಾರ್‌ಗಳಲ್ಲಿ ಪಾರ್ಸಲ್ ಸಂಸ್ಕೃತಿ ತೀವ್ರಗೊಂಡಿದ್ದು, ಇದರಿಂದ ಪ್ರವಾಸೋದ್ಯಮ ಹೋಟಲ್‌ಗಳಿಗೆ ನಷ್ಟವಾಗುತ್ತಿವೆ. ಅಬಕಾರಿಯ ಕೆಲ ನಿಯಮಗಳಿಂದ ಈ ಹೋಟೆಲ್‌ಗಳಿಗೆ ವಿನಾಯತಿ ನೀಡಬೇಕು ಎಂದು ಆಗ್ರಹಿಸಿದರು. 

ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಸುತ್ತಿರುವ ಮಾಂಸಹಾರಿ ಹೋಟೆಲ್‌ಗಳು  ಮತ್ತು ಡಾಬಗಳಲ್ಲಿ ಧಾರಾಳವಾಗಿ ಮದ್ಯ ಸರಬರಾಜು ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಕುಡಿದು ವಾಹನ ಚಾಲನೆ ಮಾಡುವವರ ಮೇಲೆ ದುಬಾರಿ ದಂಡ ವಿಧಿಸುತ್ತಿದ್ದು, ದಂಡದ ಮೊತ್ತವನ್ನು ಕಡಿತಗೊಳಿಸಬೇಕು. ಮದ್ಯ ಮಾರಾಟ ನಿಷೇಧ ದಿನಗಳನ್ನು ಕಡಿಮೆ ಮಾಡದಿದ್ದರೇ, ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಉಮೇಳ ಬಾಳಿ ತಿಳಿಸಿದರು.
 
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜಶೇಖರ ಕಲಾಲ ಮತ್ತು ಶಿವರಾಜ ಬಸಗುಂಡೆ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com