ಪ್ರವಾಹ ಸಂತ್ರಸ್ಥರ ನೆರವಿಗೆ ನಿಂತ ಸೋದೆ ಮಠ: ಕುಂಬ್ರಿ ಗ್ರಾಮ ದತ್ತು ಸ್ವೀಕಾರ..!
ಶಿರಸಿ: ಕಳೆದೊಂದು ವಾರದಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬೇಡ್ತಿ ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಸಂಪೂರ್ಣ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದ ಗ್ರಾಮವೊಂದನ್ನು ದತ್ತು ಪಡೆದು ಅಲ್ಲಿನ ಜನರ ಜೀವನವನ್ನು ಸುಧಾರಿಸಲು ಸೋದೆ ವಾದಿರಾಜ ಮಠ ಮುಂದಾಗಿದೆ.
ಸೋದೆ ಮಠದ ಯತಿಗಳಾದ ವಿಶ್ವವಲ್ಲಭ ಶ್ರೀಪಾದರ ಆಶಯದಂತೆ ಮನೆ,ಅಡುಗೆ ಸಾಮಗ್ರಿಗಳು,ನಿತ್ಯದ ಬಳಕೆ ವಸ್ತುಗಳನ್ನು ಕಳೆದುಕೊಂಡು ಅಕ್ಷರಶಃ ಅನಾಥ ಸ್ಥಿತಿಯಲ್ಲಿದ್ದ ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಮನಳ್ಳಿ ಬಳಿಯ ಕುಂಬ್ರಿ ಊರಿನ ಆರು ಕುಣಬಿ ಕುಟುಂಬಕ್ಕೆ ಮಠ ಆಸರೆಯಾಗಿ ನಿಲ್ಲಲು ತೀರ್ಮಾನಿಸಿದೆ.. ವಿತ್ರ ಚಾತರ್ಮಾಸ್ಯ ವ್ರತದಲ್ಲಿರುವ ಶ್ರೀಗಳು ಆರೂ ಕುಟುಂಬವನ್ನು ದತ್ತು ಪಡೆದು ಅವರು ಕಳೆದುಕೊಂಡ ಬದುಕನ್ನು ಪುನಃ ಕಟ್ಟಿಕೊಡಲು ಸೂಚಿಸಿದ್ದಾರೆ ಎಂದು ಮಠದ ಪರವಾಗಿ ಆಡಳಿತಾಧಿಕಾರಿ ಮಾಣಿಕ್ಯ (ರಾಧಾರಮಣ) ಉಪಾಧ್ಯಾಯ ತಿಳಿಸಿದ್ದಾರೆ.
ಕೂಲಿ, ಕೃಷಿಯನ್ನು ನಂಬಿಕೊಂಡು ಬಡತನದಲ್ಲಿ ಬದುಕನ್ನು ಮುಗ್ದತೆ, ಪ್ರಾಮಾಣಿಕತೆಯಲ್ಲಿ ತೊಡಗಿಸಿಕೊಂಡ ಆರು ಕುಟುಂಬಗಳ ಮೂವತ್ತೈದಕ್ಕೂ ಅಧಿಕ ಕುಣಬಿ ಸಮುದಾಯ ಜನರು ಕಳೆದ ವಾರದಿಂದ ಕಂಗಾಲಾಗಿತ್ತು. ದಾನಿಗಳು, ಸಂಘ ಸಂಸ್ಥೆಗಳು, ಸ್ಥಳೀಯ ಪಂಚಾಯ್ತಿ ಸಹಕಾರ ನೀಡಿದ್ದರೂ ಬಿದ್ದು ಹೋದ ಮನೆ ಕಟ್ಟಿಕೊಳ್ಳುವ ಬಗ್ಗೆ ಚಿಂತಿತರಾಗಿದ್ದರು. ಇದೇ ವೇಳೆ ಮಠದ ಪ್ರತಿನಿಧಿಯಾಗಿ ಯಲ್ಲಾಪುರ ತಹಸೀಲ್ದಾರರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ತುಂಬ್ರಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀಗಳಿಗೆ ಚಿತ್ರಣ ನೀಡಿದ ಬಳಿಕ ಈ ಸಂಕಲ್ಪ ಮಾಡಿದ್ದಾರೆ ಎಂದೂ ವಿವರಿಸಿದ್ದಾರೆ.
ಈ ಕುಟುಂಬಗಳಿಗೆ ನೆರವಾಗಲು ಮಠ ಮುಂದಾಗಿದೆ. ತಕ್ಷಣಕ್ಕೆ ಮಳೆ ಕೂಡ ಇರುವದರಿಂದ ಸ್ಥಳೀಯ ಮಂಚಿಕೇರಿ ಸೇವಾ ಸಹಕಾರಿ ಸಂಘದ ಮೂಲಕ ದಿನಸಿ ಹಾಗೂ ತಾತ್ಕಾಲಿಕ ನೆಲ ಹಾಸಲಿಗೆ ಕಲ್ಲು ಒದಗಿಸಲು ಮಠ ಚಿಂತಿಸಿದೆ. ದೀಪಾವಳಿಯ ಬಳಿಕ ಇನ್ನೊಮ್ಮೆ ನೆರೆ ಬಂದರೂ ಸಮಸ್ಯೆ ಆಗದಂತೆ ಸ್ಥಳ ನೋಡಿ ತಾಲೂಕು ಆಡಳಿತದ ಜೊತೆ ಸಮಾಲೋಚನೆ ನಡೆಸಿ ಶಾಶ್ವತ ಮನೆ ನಿರ್ಮಾಣ ಕೂಡ ಮಠ ಮಾಡಿಕೊಡಲು ಸಿದ್ದವಿದೆ ಎಂದೂ ಮಾಣಿಕ್ಯ ಉಪಾಧ್ಯಾಯ ತಿಳಿಸಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ