83ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಇನ್ನೂ 4 ಕೆರೆಗಳನ್ನು ಅಗೆಯುತ್ತಾರಂತೆ ಅಜ್ಜ ಕಾಮೇಗೌಡರು!

ಕಾಮೇಗೌಡ 83ರ ಇಳಿವಯಸ್ಸಿನ ಅಜ್ಜ. ಈ ಹಿರಿಯಜ್ಜನ ಉತ್ಸಾಹ, ಸಾಮಾಜಿಕ ಕಳಕಳಿ, ಬದುಕುವ ...
ಮಂಡ್ಯ ಜಿಲ್ಲೆಯ ಕಾಮೇಗೌಡರು
ಮಂಡ್ಯ ಜಿಲ್ಲೆಯ ಕಾಮೇಗೌಡರು
ಬೆಂಗಳೂರು: ಕಾಮೇಗೌಡ 83ರ ಇಳಿವಯಸ್ಸಿನ ಅಜ್ಜ. ಈ ಹಿರಿಯಜ್ಜನ ಉತ್ಸಾಹ, ಸಾಮಾಜಿಕ ಕಳಕಳಿ, ಬದುಕುವ ಉತ್ಸಾಹ ಒಂಚೂರು ಕಡಿಮೆಯಾಗಿಲ್ಲ. 
ಕಾಮೇಗೌಡರು ತಮ್ಮ 4 ದಶಕಗಳ ಅವಿರತ ಶ್ರಮದಿಂದ ಮಂಡ್ಯ ಜಿಲ್ಲೆಯ ಕುಗ್ರಾಮವಾದ ದಾಸನದೊಡ್ಡಿಯ ಪರ್ವತ ಪ್ರದೇಶದಲ್ಲಿ ಸುಮಾರು 14 ಕೆರೆಗಳನ್ನು ಅಗೆದು ಸುತ್ತಮುತ್ತಲ ಗ್ರಾಮಕ್ಕೆ ನೀರೊದಸಿದರು. ಆದರೆ ಅವರ ನೀರಿನ ದಾಹ ಇಷ್ಟಕ್ಕೇ ನಿಂತಿಲ್ಲ. ಇನ್ನೂ 4 ಕೆರೆಗಳನ್ನು ಅಗೆಯುವ ಆಲೋಚನೆಯಲ್ಲಿದ್ದಾರೆ.
ಕಳೆದ ವರ್ಷ ಜುಲೈಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕುರಿ ಕಾಯುವ ಕಾಮೇಗೌಡರು 14 ಕೆರೆಗಳನ್ನು ಅಗೆದ ಬಗ್ಗೆ ವಿವರವಾದ ಸರಣಿ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಅವರಿಗೆ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಕೂಡ ಸಿಕ್ಕಿತ್ತು. ಮಳವಳ್ಳಿ ತಾಲ್ಲೂಕಿನ ಇಡೀ ಪರ್ವತ ಪ್ರದೇಶವನ್ನು ನಾಲ್ಕು ದಶಕಗಳಲ್ಲಿ ನೆಲಸಮಗೊಳಿಸಿ 14 ಕೆರೆಗಳನ್ನು ಸೃಷ್ಟಿಸಿ ಅದನ್ನು ಕಾಮೇಗೌಡರೇ ನಿರ್ವಹಿಸಿಕೊಂಡು ಬಂದಿದ್ದಾರೆ.
ಈ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಸಹ ಇವರು ತೋಡಿದ ಕೆರೆಗಳಲ್ಲಿ ನೀರು ಸಾಕಷ್ಟು ಇರುತ್ತದೆ. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೆ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡಾಗ ಕಾಮೇಗೌಡರಿಗೆ ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತಂತೆ. 
ಇನ್ನೂ ನಾಲ್ಕು ಕೆರೆಗಳನ್ನು ಅಗೆಯಲು ಸ್ಥಳವನ್ನು ಹುಡುಕಿಟ್ಟಿದ್ದಾರೆ ಕಾಮೇಗೌಡರು. ಕೆಲಸ ಇನ್ನೂ ಆರಂಭಿಸಿಲ್ಲ. ನನ್ನ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು. ಅದು ಮುಗಿದ ನಂತರ ಕೆಲಸ ಕೈಗೆತ್ತಿಕೊಳ್ಳುತ್ತೇನೆ ಎನ್ನುತ್ತಾರೆ. 
ನಿಮ್ಮ ವಯಸ್ಸೆಷ್ಟು ಅಜ್ಜಾ ಎಂದು ಕೇಳಿದರೆ, ಅದೆಲ್ಲ ನನಗೆ ನೆನಪಿಲ್ಲ, ನನ್ನ ಕೊನೆಯ ಉಸಿರು  ಇರುವವರೆಗೂ ಕೆರೆ, ಸರೋವರಗಳ ಬಗ್ಗೆ ಯೋಚಿಸುತ್ತಿರುತ್ತೇನೆ, ಆ ಕೆಲಸವನ್ನು ಮಾಡುತ್ತೇನೆ ಎನ್ನುತ್ತಾರೆ.
ಕೆರೆ ಹೇಗೆ ಅಗೆಯುತ್ತೀರಿ, ದುಡ್ಡು ಎಲ್ಲಿಂದ ಎಂದು ಕೇಳಿದರೆ ನನ್ನಲ್ಲಿ ಸ್ವಲ್ಪ ಹಣವಿದೆ. ಆದರೆ ನಾಲ್ಕು ಕೆರೆ ಅಗೆಯಲು ಅಷ್ಟು ಸಾಕಾಗುವುದಿಲ್ಲ. ಯಾರಾದರೂ ಮುಂದೆ ಬಂದು ಹಣ ಅಥವಾ ಕೆರೆ ಅಗೆಯಲು ಯಂತ್ರೋಪಕರಣಗಳನ್ನು ಒದಗಿಸಬಹುದು ಎಂದರು.
ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯದ ಬಗ್ಗೆ ಕೂಡ ಕಾಮೇಗೌಡರು ಕೆಲವು ಮಾಹಿತಿ ನೀಡುತ್ತಾರೆ. ಬೆಂಗಳೂರಿನಲ್ಲಿ ಜಾಗ ಇರುವಲ್ಲಿ ಸಣ್ಣ ಸಣ್ಣ ಗುಂಡಿಗಳನ್ನು ಮತ್ತು ಕೊಳಗಳನ್ನು ಏಕೆ ಅಗೆಯಬಾರದು. ಮಳೆ ಬಿದ್ದಾಗ ನೀರು ಅಲ್ಲಿಗೆ ಇಂಗಿ ಕೊಳದಲ್ಲಿ ನೀರು ತುಂಬುತ್ತವೆ. ಬೇರೆ ಜಿಲ್ಲೆಗಳ ಮೇಲೆ ಬೆಂಗಳೂರು ಎಷ್ಟು ವರ್ಷಗಳವರೆಗೆ ನೀರು ಅವಲಂಬಿಸಿಕೊಂಡಿರಲು ಸಾಧ್ಯ ಎಂದು ಕಾಮೇಗೌಡರು ಕೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com