ಐರಾವತ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ, 209 ಫಲಾನುಭವಿಗಳಿಗೆ ವಾಹನ ವಿತರಣೆ

ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಯುವಜನತೆಯ ಆರ್ಥಿಕ ಸಬಲೀಕರಣಕ್ಕೆ ಅಡಿಪಾಯ ಹಾಕುವ 'ಐರಾವತ ಯೋಜನೆ'ಯಡಿ...
ವಿಧಾನಸೌಧದ ಮುಂದೆ ಇಂದು ಐರಾವತ ಯೋಜನೆಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ
ವಿಧಾನಸೌಧದ ಮುಂದೆ ಇಂದು ಐರಾವತ ಯೋಜನೆಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಯುವಜನತೆಯ ಆರ್ಥಿಕ ಸಬಲೀಕರಣಕ್ಕೆ ಅಡಿಪಾಯ ಹಾಕುವ 'ಐರಾವತ ಯೋಜನೆ'ಯಡಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 209 ಫಲಾನುಭವಿಗಳಿಗೆ ಓಲಾ, ಊಬರ್ ಕಾರ್ ಗಳನ್ನು ವಿತರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಮಹತ್ತರ ಯೋಜನೆ ಇದಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ಯುವಕ-ಯುವತಿಯರನ್ನು ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶದಿಂದ ಸಾಮಾಜಿಕ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯನ್ನು ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ.

ರಾಜ್ಯದ 4500 ಕುಟುಂಬಗಳ ಜೀವನೋಪಾಯಕ್ಕೆ ಅಡಿಪಾಯ ಹಾಕುವಂತಹ ಮಹತ್ತರ ಆಶಯಗಳನ್ನು ಈ ಯೋಜನೆ ಹೊಂದಿದೆ. ಐರಾವತ ಯೋಜನೆಯಡಿ 5 ಲಕ್ಷ ಮೊತ್ತದ ಕಾರುಗಳನ್ನು ಫಲಾನುಭವಿಗಳನ್ನು ನೀಡಲಾಗುತ್ತದೆ. ಟ್ಯಾಕ್ಸಿ ಖರೀದಿಗೆ ಪರಿಶಿ‍ಷ್ಟ ಜಾತಿ ಮತ್ತು ಪಂಗಡಗಳ ಯುವಕರಿಗೆ ಸಮಾಜ ಕಲ್ಯಾಣ ಇಲಾಖೆ 5 ಲಕ್ಷ ರೂ. ಹಾಗೂ ಯುವತಿಯರಿಗೆ 6 ಲಕ್ಷ ರೂ.ಗಳ ಸಹಾಯಧನ ನೀಡುತ್ತದೆ. ಟ್ಯಾಕ್ಸಿಯ ಬೆಲೆಯ ಉಳಿದ ಮೊತ್ತವನ್ನು ಬ್ಯಾಂಕ್, ಹಣಕಾಸು ಸಂಸ್ಥೆ ಮೂಲಕ ಪಡೆಯಬೇಕು ಅಥವಾ ಫಲಾನುಭವಿ ಸ್ವಂತ ಹಣಕಾಸು ವ್ಯವಸ್ಥೆ ಮಾಡಿಕೊಂಡಲ್ಲಿ ಸಹಾಯಧವನ್ನು ವಾಹನ ಖರೀದಿಗೆ ಬಿಡುಗಡೆ ಮಾಡಲು ಅವಕಾಶವಿರುತ್ತದೆ.

ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿಂದು ನಡೆದ ವಾಹನ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಜ್ಯದ 4500 ಕುಟುಂಬಗಳ ಜೀವನೋಪಾಯಕ್ಕೆ ಅಡಿಪಾಯ ಹಾಕುವಂತಹ ಮಹತ್ತರ ಆಶಯಗಳ ಈಡೇರಿಕೆಗೆ ಸಮಾಜ ಕಲ್ಯಾಣ ಇಲಾಖೆ ಐರಾವತ ಯೋಜನೆಯನ್ನು ರೂಪಿಸಿದೆ. ಯುವಕಯುವತಿಯರು ಜೀವನವನ್ನು ಸವಾಲಾಗಿ ಸ್ವೀಕರಿಸಿ ಈ ಯೋಜನೆಯ ಲಾಭ ಪಡೆದು ಅಭಿವೃದ್ಧಿಹೊಂದಬೇಕೆಂದು ಅವರು ಕರೆ ನೀಡಿದರು.

ರಾಜ್ಯದ್ಯಂತ ಹೆಚ್ಚಿನ ಫಲಾಪೇಕ್ಷಿಗಳು ವಾಹನಗಳನ್ನು ಖರೀದಿಸಿ, ಅವುಗಳ ನಿರ್ವಹಣೆ ಮೂಲಕ ಆರ್ಥಿಕ ಸ್ವಾವಲಬನೆಯನ್ನು ಹೊಂದಲು ಪ್ರಯತ್ನಿಸುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಫಲಾನುಭವಿಗಳು ಸಾಕಷ್ಟು ಆದಾಯ ಗಳಿಸಲು ವಿಫಲರಾಗುತ್ತಿರುವ ಅಂಶವನ್ನು ಗಮನಿಸಿ ಸಮಾಜ ಕಲ್ಯಾಣ ಇಲಾಖೆಯು ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ “ಐರಾವತ” ಕಾರ್ಯಕ್ರಮ ರೂಪಿಸಿರುವುದಾಗಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಐರಾವತ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 225 ಕೋಟಿ ರೂ.ವೆಚ್ಚದಲ್ಲಿ 4500 ಮಂದಿಗೆ ವಾಹನಗಳನ್ನು ನೀಡಲಾಗುತ್ತಿದ್ದು, ಈ ವಾಹನಗಳನ್ನು ಓಲಾ-ಊಬರ್ ಸಂಸ್ಥೆಗಳ ಸಹಯೋಗದೊಂದಿಗೆ ವಿತರಿಸಲಾಗುತ್ತಿದೆ. ಫಲಾನುಭವಿಗಳಿಗೆ ತರಬೇತಿ ಹಾಗೂ ಮಾರುಕಟ್ಟೆ ದೊರೆಕಿಸಿಕೊಡಲು ನೆರವು ನೀಡಲಾಗುತ್ತಿದೆ. ಈ ವ್ಯವಸ್ಥೆಯಿಂದ ಫಲಾನುಭವಿಗಳು ಅಧಿಕ ಹಾಗೂ ನಿಶ್ಚಿತ ಆದಾಯ ಗಳಿಸಲು ಸಹಕಾರಿಯಾಗುತ್ತದೆ ಎಂದರು.

ಐರಾವತ ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಗಳು ಕನಿಷ್ಟ ಒಂದು ವರ್ಷದ ಅವಧಿಗೆ ಓಲಾ-ಊಬರ್, ಮತ್ತಿತರ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸುವುದು ಕಡ್ಡಾಯ. ಐರಾವತ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಅರ್ಹ ಫಲಾನುಭವಿಗಳ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತಿದ್ದು, ಆಯ್ಕೆಯಲ್ಲಿ ಯಾವುದೇ ಹಸ್ತಕ್ಷೇಪಕ್ಕೂ ಅವಕಾಶ ನೀಡಲಾಗಿಲ್ಲ. ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳ ವಯಸ್ಸು, ವಿದ್ಯಾರ್ಹತೆ, ವಾಹನ ಚಾಲನೆಯಲ್ಲಿ ಇರುವ ಅನುಭವ, ಇತ್ಯಾಧಿ ಅಂಶಗಳನ್ನು ಪರಿಗಣಿಸಿ ಅರ್ಹ ಯುವಕರನ್ನು ಫಲಾನುಭವಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
 
ಐರಾವತ ಯೋಜನೆಯಡಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿನ ನಿಯಮಾನುಸಾರ ಆಯ್ಕೆಗೊಂಡಿರುವ ಸುಮಾರು 209 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಯಿತು. ಮೈಸೂರು, ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿಯೂ ಐರಾವತ ಕಾರ್ಯಕ್ರಮದಡಿ ವಾಹನಗಳನ್ನು ವಿತರಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರ.ಮಹೇಶ್, ವಿವಿಧ ಮಂಡಳಿಗಳ ಅಧ್ಯಕ್ಷರು, ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com