ಹಾವೇರಿ ಕೊರೋನಾ ಸೋಂಕು ಮುಕ್ತ ಜಿಲ್ಲ: ಬಸವರಾಜ ಬೊಮ್ಮಾಯಿ
ಹಾವೇರಿ: ರಾಜ್ಯದ ಇತರ ಜಿಲ್ಲೆಗಳಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದರೂ, ಹಾವೇರಿ ಜಿಲ್ಲೆಯಲ್ಲಿ ಒಂದೂ ದೃಢಪಟ್ಟಿಲ್ಲ. ಹಾಗಾಗಿ ಸೋಂಕು ಮುಕ್ತ ಜಿಲ್ಲೆ ಎಂಬ ಖ್ಯಾತಿಗೆ ಜಿಲ್ಲೆ ಪಾತ್ರವಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ಮಾಧ್ಯಮಗೋಷ್ಠಿ ನಡೆಸಿದ ಅವರು, ’ನೆರೆ ಹೊರೆಯ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಕೋವಿಡ್ –19 ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ರಾಜ್ಯದಲ್ಲಿ ಪ್ರಕರಣಗಳು ನಿಯಂತ್ರಣದಲ್ಲಿವೆ.
ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುನ್ನೆಚ್ಚರಿಕೆಯಾಗಿ ವ್ಯಾಪಾರ–ವಹಿವಾಟುಗಳ ನಿರ್ಬಂಧ ಹೇರಿದ್ದೇ ಕಾರಣ. ಜೊತೆಗೆ ವಿದೇಶಗಳಿಗಿಂತ ದೇಶದಲ್ಲಿ ಸಾವು–ನೋವು ಕಡಿಮೆ ಇರಲು ಪ್ರಧಾನಿ ಮೋದಿ ದೂರದೃಷ್ಟಿ ಕಾರಣವಾಗಿದೆ ಎಂದು ಹೇಳಿದರು.
ಮನೆ–ಮನೆಗೆ ಭೇಟಿ: ಜಿಲ್ಲೆಯ ಅಂದಾಜು 17 ಲಕ್ಷ ಜನರ ಆರೋಗ್ಯ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಈಗಾಗಲೇ 6 ಲಕ್ಷ ಜನರ ಆರೋಗ್ಯ ತಪಾಸಣೆ ಕಾರ್ಯ ಮುಗಿದಿದೆ. ಮುಂದಿನ 10 ದಿನದೊಳಗಾಗಿ ಎಲ್ಲರ ಆರೋಗ್ಯ ತಪಾಸಣೆ ನಡೆಸಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹಾಗೂ ತೀವ್ರ ಉಸಿರಾಟದ ತೊಂದರೆ ಇರುವವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಸಿಬ್ಬಂದಿ ನೇಮಕ: ಖಾಲಿ ಇರವ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದೆ. ಆರೋಗ್ಯ ಸೇತು ಆ್ಯಪ್ ನೆಟ್‍ವರ್ಕಗೆ ಜಿಲ್ಲೆ ಸಂಯೋಗ ಹೊಂದಿದೆ. ಕೋವಿಡ್ ಕುರಿತಂತೆ ಮಾರ್ಗದರ್ಶನ ಹಾಗೂ ಮಾಹಿತಿ ತಲುಪಿಸಲು ಅನುಕೂಲವಾಗಲಿದೆ. ಕೋವಿಡ್ ಕುರಿತಂತೆ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸಹಾಯವಾಣಿ ಸ್ಥಾಪಿಸಲಾಗಿದೆ ಎಂದರು.
ದುಡಿಯುವ ವರ್ಗಕ್ಕೆ ನೆರವು: ಕೋವಿಡ್ ಲಾಕ್‍ಡೌನ್‍ನಿಂದ ತೊಂದರೆಗೊಳಗಾಗಿರುವ ಆಟೊ ಚಾಲಕರು, ಸಲೂನ್ ಶಾಪ್ ಸೇರಿದಂತೆ ದುರ್ಬಲ ವರ್ಗದ ಕಾರ್ಮಿಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಯಾವ ರೀತಿ ಇವರಿಗೆ ಸಹಾಯ ಮಾಡಬಹುದು ಎಂಬುದನ್ನು ಸಿ.ಎಂ. ಜೊತೆ ಚರ್ಚಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
ಸಿಬ್ಬಂದಿಗೆ 530 ಪಿಪಿಇ ಕಿಟ್: ಕೋವಿಡ್–19 ಸೇವೆಯಲ್ಲಿ ತೊಡಗಿರುವ ಹಾವೇರಿ ಜಿಲ್ಲೆಯ ವೈದ್ಯಕೀಯ ಸಿಬ್ಬಂದಿಗಾಗಿ 530 ಪಿಪಿಇ ಕಿಟ್ ತರಿಸಿದ್ದೇವೆ. ಕೋವಿಡ್ ಮಾಸ್ಕ್ 10,500, ತ್ರಿ ಲೇಯರ್ ಮಾಸ್ಕ್‌ಗಳು 1 ಲಕ್ಷ ಹಾಗೂ ಸ್ಯಾನಿಟೈಸರ್‌ಗಳನ್ನು ದಾಸ್ತಾನು ಮಾಡಲಾಗಿದೆ. ವೈದ್ಯಕೀಯ, ಪೊಲೀಸ್, ಗೃಹರಕ್ಷಕ ದಳದ ಸಿಬ್ಬಂದಿಗೆ ವಿತರಿಸಲು ಸೂಚನೆ ನೀಡಲಾಗಿದೆ. ಕೋವಿಡ್ ತುರ್ತು ಚಿಕಿತ್ಸೆಗಾಗಿ ಕೇಂದ್ರೀಕೃತ ಆ್ಯಕ್ಸಿಜನ್ ಪೂರೈಕೆಯಾಗುವಂತೆ ಜಿಲ್ಲಾ ಕೇಂದ್ರದಲ್ಲಿ 40 ಹಾಸಿಗೆ ಸೌಲಭ್ಯ ಹಾಗೂ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಐದು ಹಾಸಿಗೆ ಸೌಲಭ್ಯವುಳ್ಳ ವಾರ್ಡ್‍ಗಳನ್ನು ಸಿದ್ಧಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ