ಲಾಕ್ ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ಅದ್ಧೂರಿ ವಿವಾಹ; ವ್ಯಾಪಕ ಟೀಕೆ
ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಮಧ್ಯೆ ಶುಕ್ರವಾರ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಲ್ಯಾಣ ತೀವ್ರ ಚರ್ಚೆ,ಟೀಕೆಗೆ ಗುರಿಯಾಗಿದೆ.
ಈ ವಿವಾಹ ಸಮಾರಂಭ ನಡೆದಿದ್ದು ರಾಮನಗರ ಜಿಲ್ಲೆಯಲ್ಲಿರುವ ಹೆಚ್ ಡಿ ಕುಮಾರಸ್ವಾಮಿಯವರ ಫಾರ್ಮ್ ಹೌಸ್ ನಲ್ಲಿ. ಸಾಮಾಜಿಕ ಅಂತರ, ಜನದಟ್ಟಣೆ ಸೇರುವುದಕ್ಕೆ ನಿಯಂತ್ರಣ, ಲಾಕ್ ಡೌನ್ ನಿರ್ಬಂಧಗಳನ್ನು ಕುಟುಂಬ ಸರಿಯಾಗಿ ಪಾಲಿಸಿದೆ, ಸರಳವಾಗಿ ವಿವಾಹ ನಡೆದಿದೆ ಎಂದು ಹೆಚ್ ಡಿಕೆ ಕುಟುಂಬಸ್ಥರು ಮತ್ತು ಜೆಡಿಎಸ್ ನಾಯಕರು ಹೇಳಿದರೂ ಕೂಡ ಇಂದು ನಡೆದ ವಿವಾಹದ ಫೋಟೋ ಮತ್ತು ವಿಡಿಯೊಗಳು ಬೇರೆಯ ಕಥೆ ಹೇಳುತ್ತವೆ.
ನಟ ಹಾಗೂ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಇಂದು ರೇವತಿ ಎಂಬುವವರ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಕೆ ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಮಾಜಿ ಸಚಿವ ಎಂ ಕೃಷ್ಣಪ್ಪ ಅವರ ಸೊಸೆ. ಲಾಕ್ ಡೌನ್ ಮಧ್ಯೆಯೂ ಇಂದು ಒಳ್ಳೆ ದಿನ ಮತ್ತು ಮುಹೂರ್ತವಿದೆ ಹೀಗಾಗಿ ಮದುವೆ ದಿನಾಂಕ ಮುಂದೂಡುವುದಿಲ್ಲ ಎಂದು ಆರಂಭದಿಂದಲೇ ಹೇಳಿಕೊಂಡು ಬಂದಿದ್ದರು. ಅದರಂತೆ ಇಂದು ವಿವಾಹ ನಡೆಯಿತು.
ವಿವಾಹ ನಡೆದ ಫಾರ್ಮ್ ಹೌಸ್ ನಿಂದ ಕನಿಷ್ಠ 10 ಕಿಲೋ ಮೀಟರ್ ದೂರದವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರಸ್ತೆ ಬಂದ್ ಮಾಡಿ ಮಾಧ್ಯಮಗಳಿಗೆ ಸಹ ಪ್ರವೇಶವಿರಲಿಲ್ಲ. ವಿವಾಹ ಮುಹೂರ್ತದ ಬಳಿಕ ಮಾಧ್ಯಮಗಳಿಗೆ ಫೋಟೋ-ವಿಡಿಯೊಗಳನ್ನು ನೀಡಲಾಯಿತು. ಅದರಲ್ಲಿ ಬಂದ ಅತಿಥಿಗಳು, ಮನೆಯವರು ಯಾರು ಕೂಡ ಸಾಮಾಜಿಕ ಅಂತರ ಪಾಲಿಸಿದ್ದು,ಮಾಸ್ಕ್, ಗ್ಲೌಸ್ ಧರಿಸಿದ್ದು ಕಂಡುಬರಲಿಲ್ಲ.
ಪೊಲೀಸರು ಫಾರ್ಮ್ ಹೌಸ್ ಸುತ್ತಮುತ್ತ ಸಾಮಾನ್ಯ ಜನರಿಗೆ ಸಂಚಾರವನ್ನು ನಿರ್ಬಂಧಿಸಿದ್ದರು. ಮದುವೆಗೆ ಹೋಗುವ ವಾಹನಗಳ ಸಂಖ್ಯೆ, ಅತಿಥಿಗಳ ಪಟ್ಟಿಯನ್ನು ಪೊಲೀಸರು ಪಡೆದಿದ್ದರು. ಮದುವೆಯಂತಹ ಸಮಾರಂಭಗಳಿಗೆ 50-60 ಜನರು ಸೇರಬಹುದು ಎಂದು ನಿಯಮವಿದ್ದರೂ ಕೂಡ 150 ಮಂದಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವಿವಾಹ ಮಂಟಪವನ್ನು ದುಬಾರಿ ಹೂವುಗಳು, ಅಲಂಕಾರಿಕ ವಸ್ತುಗಳಿಂದ, ಬಗೆ ಬಗೆಯ ವಿನ್ಯಾಸದ ಬಲ್ಬ್ ಗಳಿಂದ ವಿನ್ಯಾಸಗೊಳಿಸಿರುವುದು ಫೋಟೋ, ವಿಡಿಯೊಗಳಲ್ಲಿ ಕಂಡುಬರುತ್ತದೆ. ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳು ಸಿಗುವುದಕ್ಕೆ ಜನರು ಕಷ್ಟಪಡುತ್ತಿರುವಾಗ ಇಷ್ಟೊಂದು ದುಬಾರಿಯ, ವಿನ್ಯಾಸದ, ಅಲಂಕಾರಿಕ ವಸ್ತುಗಳು ಹೇಗೆ, ಎಲ್ಲಿಂದ ಸಿಕ್ಕವು ಎಂಬ ಪ್ರಶ್ನೆ ಮೂಡುತ್ತವೆ.
ಜನತೆ ಕೊರೋನಾ ವೈರಸ್ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವಾಗ ವಿವಾಹದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಪಾಸ್ ಮತ್ತು ಅನುಮತಿ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಸಹ ಮೂಡುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ