ಮಂಡ್ಯ: ಕೊರೋನಾ ಕಷ್ಟಕಾಲದಲ್ಲೇ 'ಜೆನರಿಕ್’ ಔಷಧಿ ಮಳಿಗೆ ಬಂದ್!

ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜನ ಸಂಜೀವಿನಿ ಜೆನರಿಕ್  ಔಷಧಿ ಮಳಿಗೆ ಕಳೆದ ೧೦ ದಿನಗಳಿಂದಲೂ ಬಾಗಿಲು ಮುಚ್ಚಿದ್ದು ರಿಯಾಯಿತಿ ದರದಲ್ಲಿ ಔಷಧಿ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ
ಬಂದ್ ಆಗಿರುವ ಜೆನರಿಕ್ ಔಷಧಿ ಮಳಿಗೆ
ಬಂದ್ ಆಗಿರುವ ಜೆನರಿಕ್ ಔಷಧಿ ಮಳಿಗೆ
Updated on

ಮಂಡ್ಯ: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜನ ಸಂಜೀವಿನಿ ಜೆನರಿಕ್  ಔಷಧಿ ಮಳಿಗೆ ಕಳೆದ ೧೦ ದಿನಗಳಿಂದಲೂ ಬಾಗಿಲು ಮುಚ್ಚಿದ್ದು ರಿಯಾಯಿತಿ ದರದಲ್ಲಿ ಔಷಧಿ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಖಾಸಗಿ ಔಷಧಿ ಅಂಗಡಿಗಳು ನಿತ್ಯವೂ ಬೆಳಿಗ್ಗೆಯಿಂದ ರಾತ್ರಿಯ ವರೆಗೂ ರೋಗಿಗಳಿಗೆ ಬೇಕಾದ ಅಗತ್ಯ ಔಷಧಿಗಳನ್ನು ಪೂರೈಸುತ್ತಿವೆ ಆದರೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿರುವ ಜೆನರಿಕ್ ಔಷಧಿ ಮಳಿಗೆ ಬಂದ್ ಆಗಿರುವುದರಿಂದ ರೋಗಿಗಳಿಗೆ ಬೇಕಾದ ಅಗತ್ಯ ಔಷಧಿಗಳು ರಿಯಾಯಿತಿ ದರದಲ್ಲಿ ದೊರೆಯದೆ ಪರಿತಪಿಸುವಂತಾಗಿದೆ

ಕಳೆದ ೧೦ ದಿನಗಳಿಂದ ಜೆನರಿಕ್ ಬಾಗಿಲು ತೆಗೆಯದೇ ಇರುವುದರಿಂದ ವಿಧಿಯಿಲ್ಲದೆ ರೋಗಿಗಳು ಹಾಗೂ ಸಾರ್ವಜನಿಕರು ಹೆಚ್ಚು ಹಣ ನೀಡಿ ಖಾಸಗಿ ಔಷಧಿ ಅಂಗಡಿಗಳಿಂದ  ಔಷಧಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಪಾಲಿಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಜೆನರಿಕ್ ಯಾವುದೇ ಕಾರಣವನ್ನು ನೀಡದೆ ಬಂದ್ ಆಗಿದೆ. ಕೊರೊನಾ ಭೀತಿಯಿಂದಾಗಿ ಜೆನರಿಕ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೆಲಸಕ್ಕೆ ಬರುತ್ತಿಲ್ಲ,ಹೀಗಾಗಿ ಮಳಿಗೆಯನ್ನು ಬಂದ್ ಮಾಡಲಾಗಿದೆ ಎಂದು ಆಸ್ಪತ್ರೆಯ ಆವರಣದಲ್ಲಿದ್ದ ರೋಗಿಯ ಸಂಬಂಧಿಯೊಬ್ಬರು ದೂರಿದರು.

ಇನ್ನು ಪ್ರಧಾನಮಂತ್ರಿ ಭಾರತೀಯಜನಔಷಧಿ ಕೇಂದ್ರದ ಮಳಿಗೆಗಳು ಸಹ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ,ಮಂಡ್ಯ ನಗರದಲ್ಲಿ ಸುಮಾರು ೬ ಜನಔಷಧಿ ಕೇಂದ್ರಗಳಿವೆ,ಈ ಪೈಕಿ ಗುತ್ತಲು,ಕಲ್ಲಹಳ್ಳಿ,ಕಾರಸವಾಡಿ ರಸ್ತೆಯಲ್ಲಿರುವ ಮಳಿಗೆಗಳು ಬಂದ್ ಆಗಿದ್ದು ಹೊಳಲು ವೃತ್ತ, ಮೂರನೇ ಮುಖ್ಯ ರಸ್ತೆಯಲ್ಲಿರುವ ಕೇಂದ್ರಗಳು ಮಾತ್ರ ಬಾಗಿಲು ತೆರೆದು ರೋಗಿಗಳಿಗೆ ರಿಯಾಯಿತಿ ದರದಲ್ಲಿ ಔಷಧಿ ಪೂರೈಸುತ್ತಿವೆ

ರೈತರ ಸೊಸೈಟಿ ಕಟ್ಟಡದಲ್ಲಿರುವ ಜನ ಔಷಧಿ ಕೇಂದ್ರ ಸಮಯ ನಿಗದಿ ಮಾಡಿಕೊಂಡಿದ್ದು ಬೆಳಿಗ್ಗೆ 7.15 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಈ ಮಳಿಗೆಯಲ್ಲಿ ಔಷಧಿ ಪಡೆಯಲು ನಗರ ಹಾಗೂ ಗ್ರಾಮೀಣ ಪ್ರದೇಶದ ನೂರಾರು ಮಂದಿ ಸಾರ್ವಜನಿಕರು ಪ್ರತಿನಿತ್ಯವೂ ಬರುತ್ತಿದ್ದು ಸಮಯ ನಿಗದಿಯ ಬಗ್ಗೆ ಗೊತ್ತಿಲ್ಲದೆ ವಾಪಸ್ಸಾಗುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸಯಮ ನಿಗಧಿ ಮಾಡಲಾಗಿದೆ ಎಂದು ಫಲಕದಲ್ಲಿ ಪ್ರಕಟಿಸಲಾಗಿದ್ದು ಶೇ.೩೦ ರಿಂದ ೭೦ ರಷ್ಟು ರಿಯಾಯಿತಿ ದರದಲ್ಲಿ ಔಷಧಿ ಮಾರುವ  ಈ ಕೇಂದ್ರ ಈ ರೀತಿ ಸಮಯ ನಿಗದಿ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತೆರೆಯಲ್ಪಟ್ಟಿರುವ ಔಷಧಿ ಮಳಿಗೆಗಳು ಸಾರ್ವಜನಿಕರ ಹಿತ ಕಾಪಾಡದೆ ಬಾಗಿಲು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ,ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಇಲಾಖೆವತಿಯಿಂದ  ತೆರೆಯಲಾಗಿರುವ ಈ ಜನ ಔಷಧಿ ಕೇಂದ್ರ ಹಾಗೂ ಜೆನರಿಕ್ ಔಷಧಿ ಮಳಿಗೆಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿ ರೋಗಿಗಳು ಮತ್ತು ಸಾರ್ವಜನಿಕರ ಹಿತಕಾಪಾಡಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಮುಂದಾಗಬೇಕೆಂದು  ಸಾರ್ವಜನಿಕರು ಒತ್ತಾಯಿಸಿದ್ದಾರೆ

ವರದಿ: ನಾಗಯ್ಯ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com