ಪಾದರಾಯನಪುರ ಘಟನೆ ವಿಚಾರದಲ್ಲಿ ಗೃಹ ಸಚಿವರೊಂದಿಗೆ ಜಟಾಪಟಿ ನಡೆದಿಲ್ಲ: ವಿ.ಸೋಮಣ್ಣ

 ಪಾದರಾಯನಪುರ ಘಟನೆಯನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಿದೆ. ಈ ಘಟನೆ ವಿಚಾರದಲ್ಲಿ ಗೃಹ ಸಚಿವ ಹಾಗೂ ತಮ್ಮ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. 
ವಿ.ಸೋಮಣ್ಣ
ವಿ.ಸೋಮಣ್ಣ

ಬೆಂಗಳುರು: ಪಾದರಾಯನಪುರ ಘಟನೆಯನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಿದೆ. ಈ ಘಟನೆ ವಿಚಾರದಲ್ಲಿ ಗೃಹ ಸಚಿವ ಹಾಗೂ ತಮ್ಮ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾದರಾಯನಪುರ ಈ ಹಿಂದೆ ತಮ್ಮ ಮತ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿತ್ತು. ಈಗ ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಈಗಿನ ಸ್ಥಳೀಯ ಶಾಸಕರು ಆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ಯಿಂದ 83 ಸಾವಿರ ಮನೆಗಳ ಕೆಲಸ ಆರಂಭ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

ಬೆಂಗಳೂರಲ್ಲಿ ನಾನು 40 ವರ್ಷಗಳಿಂದ ರಾಜಕಾರಣ‌ ಮಾಡುತ್ತಿದ್ದೇನೆ. ಈಗಿರುವ ನಾಯಕರೆಲ್ಲಾ ರಾಜಕಾರಣದಲ್ಲಿ ನನಗಿಂತ‌ ಚಿಕ್ಕವರು ಎಂದು ಸೂಚ್ಯವಾಗಿ ತಿಳಿಸಿದರು.

ಪಾದರಾಯನಪುರ ಘಟನೆ ನಿರ್ವಹಣೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವೈಫಲ್ಯವನ್ನು ಮುಂದಿಟ್ಟು ಹೈಕಮಾಂಡ್ ಗೆ ದೂರು ನೀಡುವಂತಹದ್ದೇನಲ್ಲ. ಯಡಿಯೂರಪ್ಪ ಈ ವಿಚಾರದಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ನಿಂತ ನೀರಾಗಿಲ್ಲ. ಹರಿಯುವ ನೀರಾಗಿದೆ ಎಂದು ತಿರುಗೇಟು ನೀಡಿದರು.

ಜಮೀರ್ ಅಹಮ್ಮದ್ ಒಬ್ಬ ಶಾಸಕರಾಗಿದ್ದು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹುಡುಗಾಟಿಕೆ ಬುದ್ಧಿ ತೋರಬಾರದು. ಅವರು ತಮ್ಮ ಹುಡುಗಾಟ ನಿಲ್ಲಿಸಬೇಕು ಎಂದು ಹೇಳಿದರು.

ಜುಬಿಲಿಯೆಂಟ್ ಕಾರ್ಖಾನೆಯಲ್ಲಿ 1500ಕ್ಕೂ ಮೇಲ್ಪಟ್ಟು‌ ಸಿಬ್ಬಂದಿ ಕೆಲಸ ಮಾಡುತ್ತಿದ್ದರು.‌ ಅಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ‌ ಬಂದಿದೆ ಎಂದು ಅಭಿಪ್ರಾಯಪಟ್ಟರು‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com