ಜಮಖಂಡಿ ಸಂಸ್ಥಾನದಲ್ಲೂ ಪ್ರಭುತ್ವ ಸ್ಥಾಪಿಸಿದ ಕೊರೋನಾ

ರಕ್ತ ಬೀಜಾಸುರನಂತೆ ವ್ಯಾಪಿಸುತ್ತಿರುವ ಮಹಾಮಾರಿ ಕೊರೋನಾ ಜಿಲ್ಲೆಯ ಜಮಖಂಡಿ ನಗರದಲ್ಲೂ ತನ್ನ ಅಧಿಪತ್ಯ ಸ್ಥಾಪಿಸಿದೆ.
ಬಾಗಲಕೋಟೆ ನಿರ್ಬಂದಿತ ಪ್ರದೇಶ ವೀಕ್ಷಿಸಿದ ಶಾಸಕ ವೀರಣ್ಣ ಚರಂತಿಮಠ ಮತ್ತು ಅಧಿಕಾರಿಗಳು.
ಬಾಗಲಕೋಟೆ ನಿರ್ಬಂದಿತ ಪ್ರದೇಶ ವೀಕ್ಷಿಸಿದ ಶಾಸಕ ವೀರಣ್ಣ ಚರಂತಿಮಠ ಮತ್ತು ಅಧಿಕಾರಿಗಳು.

ಬಾಗಲಕೋಟೆ: ರಕ್ತ ಬೀಜಾಸುರನಂತೆ ವ್ಯಾಪಿಸುತ್ತಿರುವ ಮಹಾಮಾರಿ ಕೊರೋನಾ ಜಿಲ್ಲೆಯ ಜಮಖಂಡಿ ನಗರದಲ್ಲೂ ತನ್ನ ಅಧಿಪತ್ಯ ಸ್ಥಾಪಿಸಿದೆ.

ಜಿಲ್ಲೆಯಲ್ಲಿ ಬಾಗಲಕೋಟೆ ಹಳೆ ಪಟ್ಟಣದಿಂದ ತನ್ನ ದಂಡಯಾತ್ರೆ ಆರಂಭಿಸಿರುವ ಕೊವಿಡ್-19 ಮುಧೋಳವರೆಗಿನ ಪ್ರದೇಶವನ್ನು ವ್ಯಾಪಿಸಿಕೊಂಡು ಅಟ್ಟಹಾಸ ಮೆರೆಯುತ್ತಿತ್ತು. ಜತೆಗೆ ಜಮಖಂಡಿಯಲ್ಲೂ ತನ್ನ ಸಾರ್ವಭೌಮ ಸ್ಥಾಪನೆಗೆ ಹವಣಿಸುತ್ತಲೇ ಇತ್ತು. 

ಮುಧೋಳದ ಮದರಸಾ ಮುಂದೆ ಕರ್ತವ್ಯ ನಿರತ ಪೊಲೀಸ್ ಪೇದೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಜಮಖಂಡಿಗೆ ಕಾಲಿಟ್ಟಿತ್ತು. ಇದೀಗ ಮತ್ತೊಬ್ಬರಲ್ಲಿ ಸೋಂಕು ದೃಢಪಟ್ಟು ತನ್ನ ಪ್ರಭುತ್ವ ಸ್ಥಾಪಿಸಿದೆ.

ಕೊರೋನಾ ತಡೆಗೆ ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳು, ನಾನಾ ಸಂಘಟನೆಗಳು ಸಂಘಟಿತ ಪ್ರಯತ್ನ ನಡೆಸಿದ್ದರೂ ಕೆಲವರ ಅಸಡ್ಡೆ ಮತ್ತು ನಿರ್ಲಕ್ಷದಿಂದಾಗಿ ಅದು ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಲೇ ಇದೆ. 

ಜನಸಾಮಾನ್ಯರಲ್ಲಿ ಸಾಕಷ್ಟು ಆತಂಕ, ಭಯ ಹುಟ್ಟಿದ್ದರೂ ಕೆಲವರು ಅದನ್ನು ನಿರ್ಲಕ್ಷಿಸುತ್ತಲೇ ಉದಾಸೀನ ಮನೋಭಾವದಲ್ಲೇ ಕಾಲ ಕಳೆಯುತ್ತಿದ್ದಾರೆ. ಪೊಲೀಸರ ಲಾಠಿ ಏಟು ತಿಂದರೂ, ಸಮುದಾಯದಲ್ಲಿ ಜನಜಾಗೃತಿ ನಡೆಯುತ್ತಿದ್ದರೂ ಅನಗತ್ಯ ಓಡಾಟ ಮುಂದುವರಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಪರಿಣಾಮವಾಗಿ ಕೊರೋನಾ ಭಯ ಬಹುತೇಕರನ್ನು ಕಾಡುತ್ತಲೇ ಇದೆ.

ಬಾಗಲಕೋಟೆಲ್ಲಿ ೧೩ ಜನರಲ್ಲಿ ಕಾಣಿಸಿಕೊಂಡಿರುವ ಅದು ಮುಧೋಳದಲ್ಲಿ ೭ ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. 
ಜಮಖಂಡಿಯಲ್ಲಿ ಇಬ್ಬರಲ್ಲಿ ಕೊರೋನಾ ಇರುವುದು ರುಜುವಾತಾಗಿದೆ. ಈ ಪೈಕಿ ಬಾಗಲಕೋಟೆಯಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಕೊರೋನಾ ವೈರಸ್‌ನ ಅಂಜಿಕೆಯಿಂದಲೇ ಜಮಖಂಡಿಯಲ್ಲಿ ವೃದ್ಧರೊಬ್ಬರು ಹೃದಯಾಘಾತಕ್ಕೀಡಾಗಿದ್ದಾರೆ. 

ಏತನ್ಮಧ್ಯೆ ಜಮಖಂಡಿಯ ಕಡಪಟ್ಟಿಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಕೊರೋನಾ ಕಟ್ಟು ನಿಟ್ಟಿನ ಕ್ರಮದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಮೃತಪಟ್ಟಿದ್ದಾರೆ.

ಹೀಗೆ ಕಳೆದೊಂದು ತಿಂಗಳಲ್ಲಿ ಕರೋನಾ ತನ್ನ ಇತಿಹಾಸವನ್ನು ಜಿಲ್ಲೆಯಲ್ಲಿ ಸೃಷ್ಟಿಸಿದೆ. ಪರಿಣಾಮವಾಗಿ ಬಾಗಲಕೋಟೆ ಜಿಲ್ಲೆಯೂ ರೆಡ್‌ಝೋನ್ ಪಟ್ಟಿಯಲ್ಲಿದೆ. ಜಿಲ್ಲೆಯ ನಿಗದಿತ ಕೆಲ ಪ್ರದೇಶಗಳಿಗೆ ಸೀಮಿತವಾಗಿರುವ ಇದು ಯಾವ ಸಮಯದಲ್ಲಿ ಎಲ್ಲಿ ಕಾಣಿಸಿಕೊಳ್ಳುತ್ತದೋ ಎನ್ನುವ ಕಾರಣಕ್ಕಾಗಿ ಜಿಲ್ಲೆಯಾದ್ಯಂತ ಲಾಕ್‌ಡೌನ್ ಮುಂದುವರಿದಿದೆ.

ಕಳೆದ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ದೃಡಪಟ್ಟಿರಲಿಲ್ಲ. ಇಂದು ಹೊಸದಾಗಿ ಎರಡು ಕೇಸ್‌ಗಳು ದೃಡಪಟ್ಟಿವೆ. ಇವುಗಳಲ್ಲಿ ಒಂದು ಕೇಸ್ ಮುಧೋಳದ್ದಾಗಿದ್ದು, ಇನ್ನೊಂದು ಜಮಖಂಡಿ ಪಟ್ಟಣಕ್ಕೆ ಸೇರಿದ್ದಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ೨೩ ಕೇಸ್‌ಗಳು ದೃಡಪಟ್ಟಿವೆ. ಇಬ್ಬರು ಗುಣಮುಖರಾಗಿದ್ದಾರೆ. ಹೋಮ್ ಕ್ವಾರಂಟೈನ್‌ನಿಂದ ೧೫೬ ಜನ ಬಿಡುಗಡೆ ಆಗಿದ್ದಾರೆ. ೬೧ ಸ್ಯಾಂಪಲ್‌ಗಳ ವರದಿ ನಿರೀಕ್ಷಿಸಲಾಗುತ್ತಿದೆ.

ಇಷ್ಟರ ಮಧ್ಯೆ ಕಳೆದ ಎರಡು ದಿನಗಳಿಂದ ಜನತೆಯ ಅನಗತ್ಯ ಓಡಾಟ ಹೆಚ್ಚಾಗಿದೆ. ಪೊಲೀಸರು ಜಿಲ್ಲಾದ್ಯಂತ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಆಯಕಟ್ಟಿನ ಸ್ಥಗಳಲ್ಲಿರುವ ಪ್ರಮುಖ ಹಾಗೂ ಉಪ ರಸ್ತೆಗಳನ್ನು ಬ್ಯಾರಿಕೇಡ್ ಹಾಕುವ ಮೂಲಕ ನಿರ್ಬಂಧಿಸಿದ್ದರೂ ಕ್ಯಾರೇ ಎನ್ನದ ರೀತಿಯಲ್ಲಿ ಜನತೆ ಓಡಾಟ ಶುರುವಾಗಿದೆ. ಲಾಕ್‌ಡೌನ್ ಮಧ್ಯೆಯೇ ಇಷ್ಟೊಂದು ಓಡಾಟ ಇದ್ದು, ಇನ್ನೂ ಇದನ್ನು ಸಡಿಲುಗೊಳಿಸಿದಲ್ಲಿ ಗತಿ ಏನು ಎನ್ನುವ ಚಿಂತೆ ಲಾಕ್‌ಡೌನ್ ಪಾಲಕರನ್ನು ಕಾಡಲಾರಂಭಿಸಿದೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com