ಮೇ 4ರ ನಂತರ ಪಾರ್ಸೆಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಿ: ಸಿಎಂಗೆ ಮದ್ಯ ಮಾರಾಟಗಾರರ ಮನವಿ
ಬೆಂಗಳೂರು: ಮೇ 4ರ ನಂತರ ಕೆಲವು ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ವೈನ್ ಮಾರಾಟಗಾರರ ಒಕ್ಕೂಟ ಗುರುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಎಲ್ಲಾ ಮದ್ಯದ ಅಂಗಡಿಗಳಲ್ಲಿ ಭಾರಿ ಪ್ರಮಾಣದ ಬಿಯರ್ ಸ್ಟಾಕ್ ಇದೆ. ಒಂದು ವೇಳೆ ಮೇ 4ರ ನಂತರ ಬಿಯರ್ ಮಾರಾಟಕ್ಕೆ ಅನುಮತಿ ನೀಡದಿದ್ದರೆ ಆ ಎಲ್ಲಾ ಬಿಯರ್ ಅನ್ನು ಸುಟ್ಟು ಹಾಕಬೇಕಾಗುತ್ತದೆ. ಬಿಯರ್ ಅನ್ನು ತಯಾರಾದ ದಿನದಿಂದ ಆರು ತಿಂಗಳಲ್ಲಿ ಮಾತ್ರ ಉಪಯೋಗಿಸಬೇಕು ಎಂದು ವೈನ್ ಒಕ್ಕೂಟ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಈಗಾಗಲೇ ನಾಲ್ಕು ತಿಂಗಳಿಂದ ಬಿಯರ್ ಸ್ಟಾಕ್ ಇದೆ. ಈಗ ಬೇಸಿಗೆ ಇರುವುದರಿಂದ ಮತ್ತು ಉಷ್ಣಾಂಶ ಹೆಚ್ಚಾಗಿರುವುದರಿಂದ ಬಿಯರ್ ಹಾಳಾಗಿರುವ ಸಾಧ್ಯತೆ ಇದೆ ಎಂದು ವೈನ್ ಒಕ್ಕೂಟದ ಕಾರ್ಯದರ್ಶಿ ಗೋವಿಂದರಾಜ್ ಹೆಗಡೆ ಅವರು ಹೇಳಿದ್ದಾರೆ.
ಈ ಸಂಬಂಧ ನಾವು ಇಂದು ಮುಖ್ಯಮಂತ್ರಿಗಳಿಗೆ ಇ-ಮೇಲ್ ಮಾಡಿದ್ದು, ಮೇ 4ರ ನಂತರ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು. ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡದಿರುವುದರಿಂದ ರಾಜ್ಯ ಸರ್ಕಾರಕ್ಕೂ ಸುಮಾರು 60 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಗೋವಿಂದರಾಜು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ