ಮಂಡ್ಯ: ಮಾದರಿ ಶಾಲೆಯಾಗಿ ಸಿಎಂ ಯಡಿಯೂರಪ್ಪ ಓದಿದ ಮುನ್ಸಿಪಲ್ ಹೈಸ್ಕೂಲ್ ಅಭಿವೃದ್ಧಿ!

ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಓದಿದ ಹೈಸ್ಕೂಲ್‌ಗೀಗ ಅಭಿವೃದ್ದಿ ಯೋಗ ಕೂಡಿಬಂದಿದೆ. ಈ ಶಾಲೆಯನ್ನು ಸುಮಾರು ೪ ಕೋಟಿ ವೆಚ್ಚದಲ್ಲಿ ನವೀಕರಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಮುನ್ಸಿಪಲ್ ಶಾಲೆ
ಮುನ್ಸಿಪಲ್ ಶಾಲೆ
Updated on

ಮಂಡ್ಯ: ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಓದಿದ ಹೈಸ್ಕೂಲ್‌ಗೀಗ ಅಭಿವೃದ್ದಿ ಯೋಗ ಕೂಡಿಬಂದಿದೆ. ಈ ಶಾಲೆಯನ್ನು ಸುಮಾರು ೪ ಕೋಟಿ ವೆಚ್ಚದಲ್ಲಿ ನವೀಕರಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಮುನ್ಸಿಪಲ್ ಶಾಲೆಯನ್ನು ಜಿಲ್ಲೆಯ ಮಾದರಿ ಶಾಲೆಯನ್ನಾಗಿ ರೂಪಿಸಲು ಜಿಲ್ಲಾಡಳಿತ ೪ ಕೋಟಿ ವೆಚ್ಚ ಮಾಡಲು ಮುಂದಾಗಿದೆ. 
ಶಾಲಾ ಕಟ್ಟಡ ಕೆಳ ಅಂತಸ್ತು ದುರಸ್ತಿ, ಮೇಲಂತಸ್ತು ನಿರ್ಮಾಣ, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ನಿರ್ಮಿಸಲು ೩ ಕೋಟಿ ಹಣ ವೆಚ್ಚ ಮಾಡಲು ನಿರ್ಧರಿಸಿದೆ.

ಗ್ರಂಥಾಲಯದಲ್ಲಿ ಪುಸ್ತಕ ಹಾಗೂ ಪೀಠೋಪಕರಣಗಳ ಖರೀದಿಗೆ ೨೦ ಲಕ್ಷ ವೆಚ್ಚ ಮಾಡಲಾಗುತ್ತಿದೆ. ೩೦ ಲಕ್ಷ ಹಣದಲ್ಲಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತಿದೆ. ಸಭಾಂಗಣಕ್ಕೆ ೩೫ ಲಕ್ಷ, ಶಾಲಾ ಕೊಠಡಿ, ಸಭಾಂಗಣದ ಪೀಠೋಪಕರಣಕ್ಕೆ ೧೫ ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ಮುರಿದು ಬೀಳುತ್ತಿದ್ದರೂ ಪ್ರಾಥಮಿಕ ಶಾಲೆಗಿಲ್ಲ ಅಭಿವೃದ್ದಿ ಭಾಗ್ಯ
ದುರಾದೃಷ್ಠಕರ ಸಂಗತಿಯೆಂದರೆ ಜಿಲ್ಲಾಡಳಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಓದಿದ ಶಾಲೆ ಎಂಬ ನೆಪದಲ್ಲಿ ಹೈಸ್ಕೂಲ್ ಅಭಿವೃದ್ದಿಗೆ ಗಮನ ಹರಿಸಿದೆ. ಆದರೆ ಮುಖ್ಯಮಂತ್ರಿಗಳು ೭, ೮ನೇ ತರಗತಿ ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದು ಬೀಳುತ್ತಿದ್ದರೂ ಅಧಿಕಾರಿಗಳು ಅತ್ತ ಕಡೆ ತಿರುಗಿ ನೋಡದಿರುವುದು ಚರ್ಚೆಗೆ ಗ್ರಾಸವಾಗಿದೆ.

ಯಡಿಯೂರಪ್ಪ ಅವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಬೂಕನಕೆರೆಯಲ್ಲಿ ಪೂರೈಸಿದ ಬಳಿಕ ಪ್ರಾಥಮಿಕ ಶಿಕ್ಷಣ ಪಡೆಯಲು ಮಂಡ್ಯಕ್ಕೆ ಬಂದರು. ಆನೆಕೆರೆ ಬೀದಿಯ ತಾತನ ಮನೆಯಲ್ಲಿದ್ದುಕೊಂಡೇ ಪೇಟೆ ಬೀದಿಯಲ್ಲಿರುವ ಶತಮಾನದಷ್ಟು ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ ಮತ್ತು ೮ನೇ ತರಗತಿ ಪೂರೈಸಿ ನಂತರ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯವರೆಗೆ ಓದಿದರು.

ಘಟಾನುಘಟಿಗಳು ಓದಿದ ಶಾಲೆ ಇದು
ಮಂಡ್ಯದ ಪಿಇಎಸ್ ಶಿಕ್ಷಣ ಶಿಲ್ಪಿ, ಮಾಜಿ ಸಚಿವ ಕೆ.ವಿ.ಶಂಕರಗೌಡ, ಮಾಜಿ ಶಾಸಕ ಎಚ್.ಡಿ.ಚೌಡಯ್ಯ ಅವರಂತಹ ಮಂಡ್ಯ ರಾಜಕೀಯದ ಘಟಾನುಘಟಿ ನಾಯಕರು ಇದೇ ಶಾಲೆಯಲ್ಲಿ ಓದಿದವರು. ಶಾಲಾ ಆವರಣದಲ್ಲೇ ತಹಶೀಲ್ದಾರ್ ಹಾಗೂ ಉಪನೋಂದಣಾಧಿಕಾರಿ ಕಚೇರಿಯೂ ಇತ್ತು. ಬದಲಾದ ಸನ್ನಿವೇಶದಲ್ಲಿ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಂಡ ನಂತರ ಇಡೀ ಕಟ್ಟಡವನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಈಗಲೂ ಸಹ ಇದು ‘ಹಳೇ ತಹಶೀಲ್ದಾರ್ ಕಚೇರಿ ಶಾಲೆ’ ಎಂದೇ ಪ್ರಸಿದ್ಧಿ ಪಡೆದಿದೆ. 

ಒಂದು ಕಾಲದಲ್ಲಿ ಮಂಡ್ಯದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು ೮೦೦ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದ ಶಾಲೆಯಲ್ಲಿ ಈಗ ಕೇವಲ ೨೦ ಮಕ್ಕಳಿದ್ದಾರೆ.

ನಗರದ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಲು ನಗರಸಭೆ ೨೦೦೭ರಲ್ಲಿ ಸರ್ಕಾರಿ ಶಾಲೆಯ ಕಾಂಪೌಂಡ್ ಸುತ್ತಲೂ ೧೬೦ ಮಳಿಗೆ ನಿರ್ಮಾಣ ಮಾಡಿತು. ಆದರೆ ಮೂಲಸೌಲಭ್ಯ ಕೊರತೆಯ ನೆಪವೊಡ್ಡಿ ವ್ಯಾಪಾರಿಗಳು ಹೊಸ ಮಳಿಗೆಗಳಿಗೆ ತೆರಳಲಿಲ್ಲ. ಹೀಗಾಗಿ ಆ ಮಳಿಗೆಗಳು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗಿದೆ. ಈ ಮಳಿಗೆಗೆ ಹೊಂದಿಕೊಂಡಂತಿರುವ ಶಾಲೆಗೂ ಅನೈತಿಕ ಚಟುವಟಿಕೆ ಚಾಚಿಕೊಂಡಿತು. ಇದರಿಂದ ಮಕ್ಕಳ ದಾಖಲಾತಿ ಕುಸಿದಿದ್ದು ಅವಶಾನದಂಚಿನ ಶಾಲೆಗಳ ಪಟ್ಟಿಯಲ್ಲಿದೆ.

ಪೇಟೆಬೀದಿ ಶಾಲೆಯಲ್ಲಿ ೧೦ ಕೊಠಡಿಗಳಿದ್ದರೂ ಒಂದು ಕೊಠಡಿಯಲ್ಲಿ ಮಾತ್ರ ಪಾಠ ನಡೆಯುತ್ತಿದೆ. ಆ ಕೊಠಡಿಯ ಗೋಡೆಯೂ ಬಿರುಕು ಬಿಟ್ಟಿದ್ದು ಶಿಕ್ಷಕರು, ಮಕ್ಕಳು ಜೀವ ಕೈಯಲ್ಲಿಡಿದು ಕಲಿಯುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಳಿಯಿಂದಾಗಿ ಮುಖ್ಯಕಟ್ಟಡದ ಹೆಂಚು ಹಾರಿ ಹೋಗಿದ್ದು ಅಲ್ಲಿ ಮುಖ್ಯಶಿಕ್ಷಕರ ಕಚೇರಿ ಇದೆ. ಕಟ್ಟಡದ ಹಿಂಭಾಗದಲ್ಲಿ ಕೊಳಚೆ ನೀರು ನಿಂತಿದ್ದು ಸೊಳ್ಳೆಗಳ ಆವಾಸಸ್ಥಾನವಾಗಿದೆ ಆದರೂ ಇತ್ತ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಗಮನಹರಿಸಿಲ್ಲ. ದೌರ್ಭಾಗ್ಯವೆಂದರೆ ಬೆಂಗಳೂರು-ಮೈಸೂರು ಎದ್ದಾರಿಯಲ್ಲಿರುವ ಸಿಎಂ ಓದಿದ ಹೈಸ್ಕೂಲ್‌ಗೆ ಮಾತ್ರ ಅಭಿವೃದ್ದಿಯ ಭಾಗ್ಯ ಕೂಡಿಬಂದಿದೆ. ಆದರೆ ಪೇಟೆ ಬೀದಯೊಳಗಿನ ಪ್ರಾಥಮಿಕ ಶಾಲೆಯನ್ನು ಅಭಿವೃದ್ದದಿಪಡಿಸಲು ಕ್ರಮಕೈಗೊಳ್ಳದಿರುವುದು ದುರಂತವೇ ಸರಿ.
-ನಾಗಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com