ಕಾನೂನು ಪದವಿಗಳ ಪರೀಕ್ಷೆ ಮುಂದೂಡಿಕೆ: ಜೆಸಿ ಮಾಧುಸ್ವಾಮಿ
ಬೆಂಗಳೂರು: ಕಾನೂನು ಪದವಿಯ ಪ್ರಥಮ ವರ್ಷದಿಂದ ನಾಲ್ಕನೇ ವರ್ಷದ ಪದವಿವರೆಗಿನ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಕಾನೂನು ಪದವಿ ಅಂತಿಮ ವರ್ಷದ ಪರೀಕ್ಷೆಗಳು ಅಕ್ಟೋಬರ್ ನಲ್ಲಿ ಅನ್ ಲೈನ್ ಮೂಲಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬುಧವಾರ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಧುಸ್ವಾಮಿ, ಮುಂದೂಡುವ ಪರೀಕ್ಷೆಗಳಲ್ಲಿ ಪಾಸ್ ಆದರೆ ಮಾತ್ರ ಅದರ ಮುಂದಿನ ಸೆಮಿಸ್ಟರ್ ಗೆ ಹೋಗಲು ಅವಕಾಶ ನೀಡಲಾಗುವುದು ಎಂದರು.
ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದರು. ಅದೇ ರೀತಿ ಶಿಕ್ಷಣ ತಜ್ಞರು, ರಾಜಕೀಯ ನಾಯಕರು ಕೂಡ ಇದೇ ಬೇಡಿಕೆ ಇಟ್ಟಿದ್ದರು. ಲಾಕ್ ಡೌನ್ ಮಾರ್ಚ್ ನಲ್ಲಿ ಆರಂಭವಾದ ಕಾರಣ ಮೂರು ತಿಂಗಳು ತರಗತಿಗಳು ನಡೆದಿಲ್ಲ. ಹಾಗಾಗಿ ಪರೀಕ್ಷೆಗಳನ್ನು ಮುಂದೂಡುತ್ತಿದ್ದೇವೆ ಎಂದರು
ಸೆಪ್ಟೆಂಬರ್ ನಲ್ಲಿ ತರಗತಿಗಳು ಆರಂಭವಾಗುತ್ತವೆ. ಅನ್ ಲೈನ್ ನಲ್ಲಿಯೂ ತರಗತಿಗಳು ಶುರುವಾಗುತ್ತವೆ. ಈಗಿರುವ ಸೆಮಿಸ್ಟರ್ ನಿಂದ ಮುಂದಿನ ಸೆಮಿಸ್ಟರ್ ಗೆ ತೇರ್ಗಡೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ