ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆಯ ಮರಿಯೊಂದಕ್ಕೆ ಲೇಖಕಿ, ಸಮಾಜ ಸೇವಕಿ, ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರ ಹೆಸರಿಡಲಾಗಿದೆ. ಇದು ವನ್ಯಜೀವಿ ಸಂರಕ್ಷಣೆಗೆ ಅವರು ನೀಡಿದ ಕೊಡುಗೆಗಳಿಗೆ ಧನ್ಯವಾದ ಸೂಚಿಸಲಿಕ್ಕಾಗಿದೆ ಎಂದು ಜೈವಿಕ ಉದ್ಯಾನದ ಅಧಿಕಾರಿಗಳು ಹೇಳಿದ್ದಾರೆ.
ಸುಧಾಮೂರ್ತಿ ಅವರ ಹೆಸರಿಡಲಾದ ಹೆಣ್ಣು ಆನೆಮರಿ ಆಗಸ್ಟ್ 17 ರಂದು 45 ವರ್ಷದ ಸುವರ್ಣ ಎಂಬ ಆನೆಗೆ ಜನಿಸಿತ್ತು. ಇದು ಈ ಉದ್ಯಾನದಲ್ಲಿನ ಆನೆಯ ಸಂಖ್ಯೆಯನ್ನು 25 ಕ್ಕೆ ಏರಿಕೆ ಮಾಡಿದೆ.
ಜೈವಿಕ ಉದ್ಯಾನದಲ್ಲಿ ಹುಲಿಗಳ ವಲಯ, ಝೀಬ್ರಾ ವಲಯ, ಜಿರಾಫೆ ವಲಯ, ಬೋರ್‌ವೆಲ್, ಕುಡಿಯುವ ನೀರಿನ ಸಂಗ್ರಹ , ಸಿಬ್ಬಂದಿ ಸಂಪನ್ಮೂಲ ಸೇರಿದಂತೆ ಅನೇಕ ವಿಭಾಗಗಳಿಗೆ ಇನ್ಫೋಸಿಸ್ ಫೌಂಡೇಶನ್ ಕೊಡುಗೆ ನೀಡಿದೆ ಎಂದು ಬಿಬಿಪಿಯ ಕಾರ್ಯನಿರ್ವಾಹಕ ನಿರ್ದೇಶಕ ವನಶ್ರೀ ವಿಪಿನ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಸುಧಾಮೂರ್ತಿ ಬಿಬಿಪಿಯ ಕಾರ್ಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ಅವರು ಹೇಳಿದರು. ಗದಗದಲ್ಲಿರುವ ಬಿಂಕದಕಟ್ಟೆ ಮಿನಿ ಮೃಗಾಲಯದ ಅಭಿವೃದ್ಧಿಗೆ ಸಹ ಅವರು ಸಹಕಾರ ನೀಡಿದ್ದಾರೆ.
ಭಾರತೀಯ ಅರಣ್ಯ ಸೇವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ "ಈ ಹಿಂದೆ ನಾನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಮತ್ತು ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ತುಳಸಿ ಗೌಡರ ಹೆ಼ಸರನ್ನು ಒಂದು ಆನೆಗೆ ಇಟ್ಟಿದ್ದೆನು. ಆಕೆ ಕರ್ನಾಟಕ ಮೂಲದವರು. ಸಾಕಷ್ಟು ತೋಟಗಾರಿಕೆ ಕೆಲಸ ಮಾಡುತ್ತಿದ್ದಾರೆ.ಪರಿಸರಕ್ಕೆ ಸಂಬಂಧಿಸಿ ಅವರ ಸೇವೆಯ ಗುರುತಿಸಲು ಅವರ ಹೆಸರನ್ನು ಆನೆಯೊಂದಕ್ಕೆ ಇಡಲಾಗಿದೆ" ಎಂದರು.
ಈ ಮೊದಲು, ಮೃಗಾಲಯವು ಆಗಸ್ಟ್ 2 ರಂದು ಮರಿಗೆ ಜನ್ಮನೀಡಿದ ರೂಪಾ ಎಂಬ ಮತ್ತೊಂದು ಆನೆಯ ಚಿತ್ರಗಳನ್ನು ಹಂಚಿಕೊಂಡಿತ್ತು ಮತ್ತು ನಂತರ ರೂಪಾ ಆನೆಯ ಮರಿ ಆರೋಗ್ಯವಾಗಿರುವ ಬಗೆಗೆ ವೀಡಿಯೊಗಳನ್ನು ಹಂಚಿಕೊಂಡಿದೆ. ಮರಿಯಾನೆ ಆನೆಯ ಹಿಂಡು ಹಾಗೂ ಅದರ ತಾಯಿಯೊಡನೆ ನಡೆದುಕೊಂಡು ಹೋಗುವುದನ್ನು ಕಾಣಬಹುದು
ಸರ್ಕಾರಿ ಸ್ವಾಮ್ಯದ ಬನ್ನೇರುಘಟ್ಟ ಉದ್ಯಾನ ಸುಮಾರು 2,300 ಪ್ರಾಣಿಗಳನ್ನು ಹೊಂದಿದೆ ಮತ್ತು 101 ವಿವಿಧ ಜಾತಿಯ ವನ್ಯಜೀವಿಗಳಿದೆ. ಉದ್ಯಾನವು 731.88 ಹೆಕ್ಟೇರ್ ಪ್ರದೇಶದಲ್ಲಿ ಹರಡಿವೆ.
Advertisement