ಎಸ್ ಎಸ್ ಎಲ್ ಸಿ-ಪಿಯುಸಿ ಮಂಡಳಿ ಶೀಘ್ರವೇ ವಿಲೀನ: ಎಸ್.ಸುರೇಶ್ ಕುಮಾರ್

ರಾಜ್ಯದಲ್ಲಿನ ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಏಕರೂಪ ಪರೀಕ್ಷಾ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಸುರೇಶ್ ಕುಮಾರ್
ಸುರೇಶ್ ಕುಮಾರ್
Updated on

ಬೆಂಗಳೂರು: ರಾಜ್ಯದಲ್ಲಿನ ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಏಕರೂಪ ಪರೀಕ್ಷಾ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಂಡರೆ, ಪಿಯು ಶೈಕ್ಷಣಿಕ ಚಟುವಟಿಕೆಯನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ನೋಡಿಕೊಳ್ಳುತ್ತಿದೆ. ಶೀಘ್ರವೇ ಇವೆರಡನ್ನೂ ವಿಲೀನಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿನ ದೀರ್ಘಕಾಲದ ಬೇಡಿಕೆ ಇದು. ಮುಂದೆ ಅಸ್ತಿತ್ವಕ್ಕೆ ಬರಲಿರುವ ಏಕರೂಪ ಮಂಡಳಿಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳೆರಡನ್ನೂ ನಡೆಸಲಿದೆ. ದೇಶದ ಹಲವು ರಾಜ್ಯಗಳಲ್ಲಿ ಒಂದೇ ಪರೀಕ್ಷಾ ಮಂಡಳಿ ಇದೆ. ರಾಜ್ಯದಲ್ಲಿಯೂ ಅದೇ ವ್ಯವಸ್ಥೆ ತರಲು ಉದ್ದೇಶಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದಂತೆ ನೀತಿ ನಿರೂಪಣೆಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸಲು ಪ್ರಾಥಮಿಕ ಶಿಕ್ಷಣ ಪರಿಷತ್‌ ರಚನೆ ಮಾಡಲಾಗುವುದು’ ಎಂದು ಸುರೇಶ್‌ಕುಮಾರ್‌ ತಿಳಿಸಿದರು. ‘ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಆಯಾಮಗಳಿವೆ. ಬೇರೆ ಬೇರೆ ಆಯಾಮದ ಶೈಕ್ಷಣಿಕ ಉದ್ದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಪರಿಷತ್‌ ಕಾರ್ಯನಿರ್ವಹಿಸಲಿದೆ. ಈ ಪರಿಷತ್‌ ತಜ್ಞರ ಸಮಿತಿಯನ್ನು ಒಳಗೊಂಡಿರುತ್ತದೆ’ ಎಂದರು.

ಅತ್ಯಂತ ಪಾರದರ್ಶಕ ಹಾಗೂ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿಯನ್ನು ರೂಪಿಸಲಾಗಿದೆ. ಬರುವ ಸೆಪ್ಟೆಂಬರ್‌ನಲ್ಲಿ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗುತ್ತವೆ ಎಂದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ ಮಾದರಿಯಲ್ಲೇ ಶಿಕ್ಷಣ ಪರಿಷತ್‌ನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಗೆಯೇ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಆದರ್ಶ ಶಿಕ್ಷಕ ಗೌರವ ಸಲ್ಲಿಸಿ ಅವರ ಬೋಧನಾ ಕ್ರಮವನ್ನು ರಾಜ್ಯದ ಎಲ್ಲೆಡೆ ಶಾಲೆಗಳಿಗೆ ಪ್ರಚುರಪಡಿಸಲು ತೀರ್ಮಾನಿಸಲಾಗಿದೆ ಎಂದರು.

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಈಗ ಪ್ರಕಟವಾಗಿದೆ. ರಾಜ್ಯದಲ್ಲೂ ಈ ನೀತಿಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದರು ಈ ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರೀಯತೆಯನ್ನು ಪುನರ್ ಜೀವನಗೊಳಿಸುವ ಜತೆಗೆ ವಿದ್ಯಾರ್ಥಿಗಳನ್ನು ಪರಿಪೂರ್ಣ ಮಾನವರಾಗಿ ರೂಪಿಸುವ ನೀತಿಯಾಗಿದೆ ಎಂದು ಅವರು ಬಣ್ಣಿಸಿದರು. ಸದ್ಯದಲ್ಲೇ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವುದಾಗಿ ಅವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com