ಬೆಂಗಳೂರು: ಗೋಹತ್ಯೆ ನಿಷೇಧ ರಾಜ್ಯದಲ್ಲಿ ಮತ್ತಷ್ಟು ಬಲಗೊಳಿಸಲು ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿನ ಕಾನೂನುಗಳ ಅಧ್ಯಯನಕ್ಕಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ನೇತೃತ್ವದ ತಂಡ ಬುಧವಾರದಿಂದ ಈ ಎರಡೂ ರಾಜ್ಯಗಳಿಗೆ ತೆರಳಲಿದೆ.
ಸಚಿವರ ಜತೆಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಸಹ ಭೇಟಿ ನೀಡಲಿದ್ದಾರೆ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ಮಸೂದೆ ಮಂಡನೆ ಮಾಡಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಈಗಾಗಲೇ ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ಗೋಹತ್ಯೆ ಕಾಯ್ದೆ ಅನುಷ್ಠಾನ ಮಾಡಲಾಗಿದ್ದು, ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲು ಪಶುಸಂಗೋಪನೆ ಇಲಾಖೆಯ ಸಚಿವರು ಮುಂದಾಗಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಕಾಯ್ದೆಯ ಅನುಷ್ಟಾನ, ನಿರ್ವಹಣೆ ಮತ್ತು ಗೋಶಾಲೆಗಳಿಗೆ ಭೇಟಿ ಮಾಡಿ ಗೋವುಗಳ ರಕ್ಷಣೆ ಮತ್ತು ಅವುಗಳ ಆರೈಕೆಗಾಗಿ ಈ ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳನ್ನು ಅಲ್ಲಿನ ಪಶುಸಂಗೋಪನೆ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಸಚಿವ ಪ್ರಭು ಚವ್ಹಾಣ್ ನೇತೃತ್ವದ ತಂಡ ಡಿಸೆಂಬರ್ 2 ರಿಂದ 4ರ ವರೆಗೆ ಉತ್ತರ ಪ್ರದೇಶದ ಲಖನೌ, ಗುಜಾರತ್ ನ ಗಾಂಧಿನಗರಕ್ಕೆ ಭೇಟಿ ನೀಡಲಿದೆ.
Advertisement