ಆಸ್ಪತ್ರೆಗಳ ಅವ್ಯವಸ್ಥೆ: ಮೈಸೂರಿನ ಕೋವಿಡ್-19 ಸೋಂಕಿತ ವಿಧವೆಯನ್ನು ಅಪರಿಚಿತ ಶವ ಎಂದು ದಹನ!

ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ 60 ವರ್ಷದ ಕೋವಿಡ್-19 ರೋಗಿಯನ್ನು ಮೈಸೂರಿನ ನಿಯೋಜಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಕರೆತರಲಾಗಿತ್ತು. ಆದರೆ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟು ಕುಟುಂಬದವರಿಲ್ಲದೆ ಅಪರಿಚಿತ ಮೃತದೇಹವೆಂದು ಸುಟ್ಟ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ 60 ವರ್ಷದ ಕೋವಿಡ್-19 ರೋಗಿಯನ್ನು ಮೈಸೂರಿನ ನಿಯೋಜಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಕರೆತರಲಾಗಿತ್ತು. ಆದರೆ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟು ಕುಟುಂಬದವರಿಲ್ಲದೆ ಅಪರಿಚಿತ ಮೃತದೇಹವೆಂದು ಸುಟ್ಟ ಘಟನೆ ನಡೆದಿದೆ.

ರತ್ನ (ಹೆಸರು ಬದಲಿಸಲಾಗಿದೆ) ಪಿರಿಯಾಪಟ್ಟಣದ ನಂದೀಪುರ ಗ್ರಾಮದ ವಿಧವೆ. ಕಳೆದ ಸೆಪ್ಟೆಂಬರ್ 18ರಂದು ಕೊರೋನಾ ಪಾಸಿಟಿವ್ ಕಂಡುಬಂದು ವಿಪರೀತ ಜ್ವರದಿಂದ ಮೈಸೂರಿನ ಆಸ್ಪತ್ರೆಗೆ ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಕರೆತರಲಾಯಿತು. ಆಸ್ಪತ್ರೆಗೆ ಕರೆದುಕೊಂಡು ಬಂದ ನಂತರ ಎರಡು ವಾರ ಏನಾಯಿತು ಎಂದು ಆಸ್ಪತ್ರೆ ಕಡೆಯಿಂದ ಕುಟುಂಬದವರಿಗೆ ಮಾಹಿತಿಯೇ ನೀಡಲಿಲ್ಲ. ಕುಟುಂಬಸ್ಥರು ನಂತರ ಒಂದು ಪೊಲೀಸ್ ಠಾಣೆಯಿಂದ ಇನ್ನೊಂದು ಪೊಲೀಸ್ ಠಾಣೆಗೆ ಅಲೆದು ಕೊನೆಗೆ ಕಳೆದ ಅಕ್ಟೋಬರ್ 30ರಂದು ಮೈಸೂರಿನ ಮೆಟಗಲ್ಲಿ ಪೊಲೀಸ್ ಠಾಣೆಗೆ ಹೋದಾಗ ವಿಧವೆಯನ್ನು ಅನಾಥ ಮೃತದೇಹವೆಂದು ಸುಟ್ಟುಹಾಕಿದ್ದಾರೆ ಎಂದು ಗೊತ್ತಾಯಿತು ಎನ್ನುತ್ತಾರೆ ಆಕೆಯ ಸೋದರ ಭಾಸ್ಕರಾಚಾರ್. 

ಸೆಪ್ಟೆಂಬರ್ 19ರಂದು ಕೋವಿಡ್-19 ಆಸ್ಪತ್ರೆ ಪಕ್ಕ ರಸ್ತೆ ಮೇಲೆ ಮಧ್ಯರಾತ್ರಿ 12ರ ಸುಮಾರಿಗೆ ಅನಾಥೆಯಾಗಿ ಮೃತದೇಹ ಬಿದ್ದಿತ್ತಂತೆ. ಆಕೆಯ ಗುರುತು ಪತ್ತೆಗೆ ಏನೂ ಇರಲಿಲ್ಲ. ಆದರೆ ಹೊರಗೆ ರಸ್ತೆಯಲ್ಲಿ ಮೃತದೇಹ ಹೇಗೆ ಬಿದ್ದಿತ್ತು, ಆಕೆ ಅಲ್ಲಿ ಮೃತಪಟ್ಟರೇ ಎಂಬುದಕ್ಕೆ ಯಾವುದೇ ಉತ್ತರವಿಲ್ಲ. 

ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿತ್ತು. ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಇಲ್ಲ ಎಂದು ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿರಬಹುದು. ಸ್ಥಳೀಯ ಅಧಿಕಾರಿಗಳು ಮತ್ತು ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯತನವೇ ಇದಕ್ಕೆ ಕಾರಣ ಎಂದು ಮೃತ ಮಹಿಳೆಯ ಸೋದರ ಭಾಸ್ಕರಾಚಾರ್ ಆರೋಪಿಸುತ್ತಾರೆ.

ಆಸ್ಪತ್ರೆಯಲ್ಲಿ ತಮ್ಮ ಸೋದರಿಗೆ ಚಿಕಿತ್ಸೆ ನೀಡುತ್ತಿರಬಹುದು ಎಂದೇ ನಾವು ಭಾವಿಸಿದ್ದೆವು. ಆದರೆ ಎರಡು ವಾರ ಕಳೆದರೂ ಸುದ್ದಿ ಬಾರದಿದ್ದಾಗ ಮೈಸೂರು ಆಸ್ಪತ್ರೆಯನ್ನು ವಿಚಾರಿಸಿದೆವು. ಆದರೆ ಆ ಹೆಸರಿನಲ್ಲಿ ಯಾವುದೇ ಮಹಿಳೆ ದಾಖಲಾಗಿಲ್ಲ ಎಂಬ ಉತ್ತರ ನಮಗೆ ಬಂದು ಆಘಾತವಾಯಿತು ಎನ್ನುತ್ತಾರೆ ಭಾಸ್ಕರಾಚಾರ್.

ಆ ಹೆಸರಿನಲ್ಲಿ ದಾಖಲಾದ ದಾಖಲೆಯಿಲ್ಲ, ಆರೋಗ್ಯಾಧಿಕಾರಿ: ರತ್ನ ಅವರ ಮನೆಯವರು ರವಂದೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಸಹ ನೀಡಿದರು. ಎರಡೂ ಪೊಲೀಸ್ ಠಾಣೆಗಳಲ್ಲಿ ಮಹಿಳೆ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಳ್ಳಲಿಲ್ಲ. ಕೋವಿಡ್ -19 ಆಸ್ಪತ್ರೆಯ ಹತ್ತಿರವಿರುವ ಮೆಟಗಲ್ಲಿ ಪೊಲೀಸ್ ಠಾಣೆಗೆ ಅಪರಿಚಿತ ಮೃತದೇಹದ ಶವದ ಫೋಟೋವನ್ನು ಭಾಸ್ಕರಾಚಾರ್ ಕಳುಹಿಸಿದರು. ಅವರಲ್ಲಿ ರತ್ನ ಅವರ ಮೃತದೇಹದ ಫೋಟೋ ಕಂಡು ಕುಟುಂಬಸ್ಥರು ಆಘಾತಕ್ಕೊಳಗಾದರು.

ಪಿರಿಯಾಪಟ್ಟಣ ಆರೋಗ್ಯಾಧಿಕಾರಿಗಳನ್ನು ಕೇಳಿದರೆ ಮಹಿಳೆಯನ್ನು ದಾಖಲಿಸಿಕೊಂಡಿದ್ದೇವೆ ಎನ್ನುತ್ತಾರೆ. ಆದರೆ ಕೋವಿಡ್-19 ಆಸ್ಪತ್ರೆಗೆ ಕರೆ ಮಾಡಿ ಕೇಳಿದಾಗ ಆ ಸಮಯದಲ್ಲಿ ಕೋವಿಡ್ ಸೋಂಕು ವಿಪರೀತವಾಗಿತ್ತು. ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಿತ್ತು. ಪ್ರತಿದಿನ ನೂರಾರು ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿದ್ದರು ಎಂದು ರತ್ನ ಅವರು ದಾಖಲಾಗಿದ್ದರು ಎಂದು ಹೇಳಲಾದ ಆಸ್ಪತ್ರೆಯ ವೈದ್ಯರೊಬ್ಬರು ಹೇಳುತ್ತಾರೆ.

ಆದರೆ ರತ್ನ ಅವರು ಆಸ್ಪತ್ರೆಗೆ ದಾಖಲಾದ ಬಗ್ಗೆ ದಾಖಲೆಗಳಿಲ್ಲ ಎನ್ನುತ್ತಾರೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಟಿ ಅಮರನಾಥ್. ತಮ್ಮ ಕಡೆಯಿಂದ ಲೋಪದೋಷವಾಗಿದೆ ಎಂದಾಗ ಈ ಬಗ್ಗೆ ಇದುವರೆಗೆ ಯಾರೂ ದೂರು ನೀಡಿಲ್ಲ. ಮೇಟಗಲ್ಲಿ ಪೊಲೀಸರು ಕೂಡ ತಾವು ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಭಾಸ್ಕರಾಚಾರ್ ಅವರ ಪತ್ನಿ ಮತ್ತು 90 ವರ್ಷದ ಅಜ್ಜಿಗೆ ಕೊರೋನಾ ಬಂದು ಪಿರಿಯಾಪಟ್ಟಣದ ಆಸ್ಪತ್ರೆಗೆ ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗಿ ಬಂತು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com