ಹಿರಿಯ ವಿದ್ವಾಂಸ, ಪ್ರವಚಕ ಡಾ.ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ 

ನಾಡಿನ ಪ್ರಮುಖ ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಬನ್ನಂಜೆ ಗೋವಿಂದಾಚಾರ್ಯ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಡಾ ಬನ್ನಂಜೆ ಗೋವಿಂದಾಚಾರ್ಯ
ಡಾ ಬನ್ನಂಜೆ ಗೋವಿಂದಾಚಾರ್ಯ
Updated on

ಉಡುಪಿ: ನಾಡಿನ ಪ್ರಮುಖ ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಬನ್ನಂಜೆ ಗೋವಿಂದಾಚಾರ್ಯ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯ ಕಾಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

84 ವರ್ಷದ ಬನ್ನಂಜೆ ಗೋವಿಂದಾಚಾರ್ಯರು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಇತ್ತೀಚೆಗೆ ನಿಧನರಾಗಿದ್ದರು.
ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಡಾ.ಬನ್ನಂಜೆ 1936ರಲ್ಲಿ ಜನಿಸಿದ್ದರು. ಮಾಧ್ವ ತತ್ವದಲ್ಲಿ ವಿಶೇಷ ಪಾಂಡಿತ್ಯ, ಅನುಭವ ಹೊಂದಿದ್ದ ಡಾ ಬನ್ನಂಜೆಯವರು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಕೂಡ ಅಷ್ಟೇ ಜ್ಞಾನ ಹೊಂದಿದ್ದರು. ಮಾದ್ವ ತತ್ವಗಳನ್ನು ಪ್ರಚುರಪಡಿಸುತ್ತಿದ್ದರು. ಅನೇಕ ಕೃತಿಗಳನ್ನು, ವ್ಯಾಖ್ಯಾನಗಳು, ಅನುವಾದಗಳನ್ನು ರಚಿಸಿದ್ದಾರೆ. 

ಕನ್ನಡದ ಖ್ಯಾತ ನಟ ದಿವಂಗತ ಡಾ ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮಿಕ ಗುರುಗಳಾಗಿದ್ದರು ಬನ್ನಂಜೆಯವರು. 

ಭಾರತೀಯ ತತ್ವಶಾಸ್ತ್ರ, ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನ ನೀಡುವ ಸಲುವಾಗಿ ದೇಶ ವಿದೇಶಗಳಲ್ಲಿ ಸಂಚಾರ ಮಾಡುತ್ತಿದ್ದರು. ಅವರ ಪುತ್ರ ಡಾ ವೀಣಾ ಬನ್ನಂಜೆ ಕೂಡ ಪ್ರವಚನ, ಭಾಷಣಗಳ ಮೂಲಕ ಜನಪ್ರಿಯರು.

ಅಪಾರ ಪಾಂಡಿತ್ಯದ ಭಂಡಾರ ಡಾ.ಬನ್ನಂಜೆ: ವಿದ್ವಾಂಸ ಡಾ.ಬನ್ನಂಜೆಯವರು ವೇದ ಭಾಷ್ಯ, ಉಪನಿಷತ್ ಭಾಷ್ಯ, ಮಹಾಭಾರತ, ಪುರಾಣ ಮತ್ತು ರಾಮಾಯಣಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ವೇದ ಸೂಕ್ತ, ಉಪನಿಷತ್, ಶಟ ರುದ್ರಿಯಾ, ಬ್ರಹ್ಮ ಸೂತ್ರ ಭಾಷ್ಯ, ಗೀತ ಭಾಷ್ಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಸಂಸ್ಕೃತ ವ್ಯಾಖ್ಯಾಯನ ಎಂಬ ಸುಮಾರು 4 ಸಾವಿರ ಪುಟಗಳ ಸಮಗ್ರ ಕೃತಿ, ಸುಮಾರು 150 ಪುಸ್ತಕಗಳನ್ನು ಬರೆದಿದ್ದಾರೆ.

ಸಂಸ್ಕೃತದಿಂದ ಕನ್ನಡಕ್ಕೆ ಹಲವಾರು ಅನುವಾದಗಳನ್ನು ಮಾಡಿದ್ದಾರೆ. ಬಾಣ ಬಟ್ಟನ ಕಾದಂಬರಿ ಎಂಬ ಬಾಣ ಬಟ್ಟನ ಕಾದಂಬರಿ, ಕಾಳಿದಾಸನ ಶಕುಂತಲಾ, ಶೂದ್ರಕನ ಮೃಚಕಟಿಕವನ್ನು ಆವೆಯ ಮಣ್ಣಿನ ಆಟದ ಬಂಡಿ ಎಂದು ಅನುವಾದ ಮಾಡಿದ್ದು ಅದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿತ್ತು. ಬವಬೂತಿಯ ಉತ್ತರಮಚರಿತವನ್ನು ಸಹ ಅನುವಾದ ಮಾಡಿದ್ದಾರೆ.

ಹಲವು ಐತಿಹಾಸಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದು ಪಠ್ಯ ಉಪನಿಷತ್ ನ ಅಧ್ಯಾಯಗಳ ಮೇಲೆ ವ್ಯಾಖ್ಯಾನ ಬರೆದಿದ್ದಾರೆ. 

ಸಂಸ್ಕೃತದಲ್ಲಿ ಅವರ ಕಿರು ವ್ಯಾಖ್ಯಾನಗಳಲ್ಲಿ ಶ್ರೀ ತ್ರಿವಿಕ್ರಮರ್ಯ ದಾಸ ಅವರ 'ಆನಂದಮಾಲಾ', ಶ್ರೀ ತ್ರಿವಿಕ್ರಮ ಪಂಡಿತ ಅವರ 'ವಾಯು ಸ್ತುತಿ' ಮತ್ತು ಶ್ರೀ ತ್ರಿವಿಕ್ರಮ ಪಂಡಿತ ಅವರ 'ವಿಷ್ಣು ಸ್ತುತಿ' ಸೇರಿವೆ.

ಮಧ್ವಾಚಾರ್ಯ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಎಂಬ ಮೂರು ಕನ್ನಡ ಸಿನೆಮಾಗಳಿಗೆ ಸಂಭಾಷಣೆ ಬರೆದಿದ್ದಾರೆ.

1979ರಲ್ಲಿ ಅಮೆರಿಕದ ಪ್ರಿನ್ಸ್ ಟನ್ ನಲ್ಲಿ ನಡೆದ ವಿಶ್ವ ಧಾರ್ಮಿಕ ಮತ್ತು ಶಾಂತಿ ಸಮ್ಮೇಳನದ ಭಾರತದ ರಾಯಭಾರಿಯಾಗಿದ್ದರು. 

ಗೋವಿಂದಾಚಾರ್ಯ ಅವರ ಕಿರಿಯ ಪುತ್ರ ವಿಜಯಭೂಷಣ ಆಚಾರ್ಯ ಕಳೆದ ಡಿಸೆಂಬರ್ 2ರಂದು ತೀರಿಕೊಂಡಿದ್ದರು. ಡಾ.ಬನ್ನಂಜೆಯವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com