ಪರಿಷ್ಕೃತ ರೂಪುರೇಷೆಗಳೊಂದಿಗೆ ವಿದ್ಯಾಗಮ ಯೋಜನೆ ಮತ್ತೆ ಆರಂಭ: ಸುರೇಶ್ ಕುಮಾರ್

ಕೋವಿಡ್ ಸೋಂಕಿನಿಂದ ಸ್ಥಗಿತಗೊಂಡಿದ್ದ ವಿದ್ಯಾಗಮ ಯೋಜನೆಯನ್ನು ಸುರಕ್ಷತಾ ಕ್ರಮಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್
Updated on

ಬೆಂಗಳೂರು: ಕೋವಿಡ್ ಸೋಂಕಿನಿಂದ ಸ್ಥಗಿತಗೊಂಡಿದ್ದ ವಿದ್ಯಾಗಮ ಯೋಜನೆಯನ್ನು ಸುರಕ್ಷತಾ ಕ್ರಮಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

‘ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮವನ್ನು ಅಕ್ಟೋಬರ್ 10ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮ ಆರಂಭಿಸಿದ್ದರಿಂದ ಮಕ್ಕಳು ಶಾಲೆಯಿಂದ ದೂರ ಉಳಿಯುವುದು, ಗ್ರಾಮೀಣ ಪ್ರದೇಶದಲ್ಲಿ ಪೋಷಕರೊಂದಿಗೆ ಶಾಲಾ ಸಮಯದಲ್ಲಿ ಕೆಲಸಗಳಿಗೆ ತೆರಳುವುದು, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿಯಂತಹ ಪಿಡುಗುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಅನುವಾಗಿತ್ತು’ ಎಂದು ಅವರು ವಿವರಿಸಿದ್ದಾರೆ.

ಸಾಂಕ್ರಾಮಿಕದಿಂದಾಗಿ ಶಾಲಾರಂಭ ತಡವಾದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದ್ದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು  ಸುರಕ್ಷತಾ ಕ್ರಮಗಳೊಂದಿಗೆ ಹೊಸ  ರೀತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಕಾರ್ಯಕ್ರಮವು ನಡೆಯಲು ಅನುವು ಮಾಡಿಕೊಡಲಾಗಿದೆ. ಪ್ರಸ್ತುತ ಇರುವ ಆನ್ಲೈನ್, ಚಂದನಾ ವಾಹಿನಿಯ ಪಾಠಗಳು ಎಂದಿನಂತೆ ಮುಂದುವರೆಯಲಿವೆ ಎಂದರು.

ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಶಾಲಾವರಣಕ್ಕೆ ಬಂದು ಸಾಮಾಜಿಕ ಅಂತರದೊಂದಿಗೆ ಕುಳಿತು ಪಾಠ ಕಲಿಯಬಹುದಾಗಿದೆ. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಪ್ರತಿ ಶಾಲೆಯಲ್ಲಿ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಮತ್ತು ಕೋವಿಡ್-19ರ ಲಕ್ಷಣಗಳಿರುವ ವಿದ್ಯಾರ್ಥಿಗಳು
ಬರುವಂತಿಲ್ಲ. ಸ್ಯಾನಿಟೈಸರ್, ಸೋಪ್ ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಿಕೊಳ್ಳುವುದು ಎಂದರು.

ಮಕ್ಕಳನ್ನು ಲಭ್ಯ ಶಿಕ್ಷಕರ ಸಂಖ್ಯೆ, ಲಭ್ಯ ಕೊಠಡಿಗಳ ಅನುಸಾರವಾಗಿ 15-20 ವಿದ್ಯಾರ್ಥಿಗಳ ತಂಡ ರಚಿಸುವುದು. ಆಯಾ ಸ್ತರದ  ಸ್ಥಳೀಯ ಸಂಸ್ಥೆಗಳು ಸ್ಯಾನಿಟೈಸೇಷನ್ ಜವಾಬ್ದಾರಿ ತೆಗೆದುಕೊಳ್ಳಲಿದ್ದು, ಮಕ್ಕಳು ಕುಡಿಯಲು ನೀರನ್ನು ತಮ್ಮೊಂದಿಗೆ ಮನೆಯಿಂದಲೇ ತರಲು ಸಲಹೆ ನೀಡಬಹುದು. ಅಗತ್ಯ ಬಿದ್ದಾಗ ಸ್ಥಳೀಯ ಆರೋಗ್ಯ ಇಲಾಖೆಯ ಸಹಕಾರ ಪಡೆಯಲು ಅವಕಾಶವಿದೆ. ಇದೇ ರೀತಿಯ ಹತ್ತು ಹಲವು ಕಟ್ಟುನಿಟ್ಟಿನ  ಕ್ರಮಗಳೊಂದಿಗೆ ವಿದ್ಯಾಗಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ವಿದ್ಯಾಗಮದ ಅನುಷ್ಠಾನಾಧಿಕಾರಿಗಳಾಗಿದ್ದಾರೆ. ವಿದ್ಯಾಗಮ ತರಗತಿಗಳು ಪಾಳಿಗಳಲ್ಲಿ ಅಂದರೆ ಬೆಳಗ್ಗೆ 45 ನಿಮಿಷದ  3
ತರಗತಿಗಳು ಮತ್ತು ಮಧ್ಯಾಹ್ನದ ಪಾಳಿಯಲ್ಲಿ 3 ತರಗತಿಗಳನ್ನು ನಡೆಸಲಾಗುತ್ತದೆ.  ಒಂದು ದಿನಕ್ಕೆ 7ರಿಂದ 8 ತಂಡಗಳಲ್ಲಿ‌ ವಿದ್ಯಾರ್ಥಿಗಳಿಗೆ ಬರಲು ಸೂಚಿಸಲಾಗುತ್ತಿದೆ‌‌ ಎಂದರು

ವಿದ್ಯಾಗಮವು ಶಾಲೆಯ ಆರಂಭವಲ್ಲ. ಒಮ್ಮೆಗೆ ಅತಿ ಕಡಿಮೆ ಸಂಖ್ಯೆಯ ಮಕ್ಕಳ ತಂಡದೊಂದಿಗೆ ಶಾಲಾವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಅನುಕೂಲಕ್ಕೆ ತಕ್ಕಂತೆ ಪಾಠಗಳು ನಡೆಯುತ್ತವೆ. ತಜ್ಞರ ಸಮಿತಿಯ ಶಿಫಾರಸಿನನ್ವಯ ವೈಜ್ಞಾನಿಕವಾಗಿ ತರಗತಿಗಳು ನಡೆಯುತ್ತಿದ್ದು, ಎಲ್ಲ ರೀತಿಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು-ಎಸ್ಒಪಿ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ. ಮಕ್ಕಳು ತರಗತಿ ಪಾಠಗಳಿಗೆ ಹಾಜರಾದಂತೆ ಎಲ್ಲರೂ ಒಂದೇ ಬಾರಿಗೆ ಬರುತ್ತಿಲ್ಲ. ಆಯಾ ಪ್ರದೇಶದ ಮಾರ್ಗದರ್ಶಿ ಶಿಕ್ಷಕರು ತಮಗೆ ಸನಿಹದ ನೆರೆಹೊರೆಯ ಕೆಲವೇ ಮಕ್ಕಳನ್ನು ತಂಡದಲ್ಲಿ ಪಟ್ಟಿ ಮಾಡುತ್ತಾರೆ.

ಇದು ಶಾಲಾರಂಭವಲ್ಲ ಎಂಬುದನ್ನು ಪೋಷಕರು ಮನಗಾಣಬೇಕು’ ಎಂದು ಸಚಿವರು ಹೇಳಿದ್ದಾರೆ. ವಿದ್ಯಾಗಮ ಗ್ರಾಮೀಣಪ್ರದೇಶದ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಆನ್-ಲೈನ್ ಶಿಕ್ಷಣ ವಂಚಿತರಿಗೆ ಅನುಕೂಲವಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯು ಯಾವುದೇ ವಿದ್ಯಾರ್ಥಿಯ ಕಲಿಕೆಯನ್ನು ಹಕ್ಕಾಗಿ ಪರಿಗಣಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com