ಹೊಸಕೋಟೆಯ ಕ್ರಸ್ಟ್ ಕ್ಯಾಂಪಸ್‌ನಲ್ಲಿರುವ ಖ್ಯಾತ ಆಪ್ಟಿಕಲ್ ಫೈಬ್ರಿಕೇಷನ್ ಸೌಲಭ್ಯ ಘಟಕ ಉದ್ಘಾಟಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಹೊಸಕೋಟೆಯ ಕ್ರಸ್ಟ್ ಕ್ಯಾಂಪಸ್‌ನಲ್ಲಿರುವ ಖ್ಯಾತ ಆಪ್ಟಿಕಲ್ ಫೈಬ್ರಿಕೇಷನ್ ಸೌಲಭ್ಯ ಘಟಕ ಉದ್ಘಾಟಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ದೇಶದ ಪಾರಂಪರಿಕ ಜ್ಞಾನ, ಆಧುನಿಕ ತಂತ್ರಜ್ಞಾನದ ಪ್ರಗತಿಗೆ ವಿಜ್ಞಾನಿಗಳು, ಸಂಶೋಧಕರ ಕೊಡುಗೆ ಅಗತ್ಯ: ವೆಂಕಯ್ಯ ನಾಯ್ಡು

ದೇಶದ ಪ್ರಗತಿಗೆ ವಿಜ್ಞಾನಿಗಳು ಮತ್ತು ಸಂಶೋಧಕರು ಒಟ್ಟಿಗೆ ಕಾರ್ಯನಿರ್ವಹಿಸಬೇಕು ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. 
Published on

ಬೆಂಗಳೂರು: ದೇಶದ ಪ್ರಗತಿಗೆ ವಿಜ್ಞಾನಿಗಳು ಮತ್ತು ಸಂಶೋಧಕರು ಒಟ್ಟಿಗೆ ಕಾರ್ಯನಿರ್ವಹಿಸಬೇಕು ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. 

ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ ಅವರು ಬಳಿಕ ಹೊಸಕೋಟೆಯ ಕ್ರಸ್ಟ್ ಕ್ಯಾಂಪಸ್‌ನಲ್ಲಿರುವ ಖ್ಯಾತ ಆಪ್ಟಿಕಲ್ ಫೈಬ್ರಿಕೇಷನ್ ಸೌಲಭ್ಯ ಘಟಕವನ್ನು ಇಂದು ಬೆಳಗ್ಗೆ ಉಪರಾಷ್ಟ್ರಪತಿ ಅವರು ಲೋಕಾರ್ಪಣೆ ಮಾಡಿದರು.

ಇದೇ ಆವರಣದಲ್ಲಿ ಪರಿಸರ ಪರೀಕ್ಷಾ ಸೌಲಭ್ಯಕ್ಕೂ ಚಾಲನೆ ನೀಡಿದರು. ಏಷ್ಯಾದ ಅತ್ಯಂತ ದೊಡ್ಡ ಹಿಮಾಲಯನ್ ಚಂದ್ರ ಟೆಲಿಸ್ಕೋಪ್‌ನ ನಿರ್ದೇಶಕರು ಹಾಗೂ ಇತರ ವಿಜ್ಞಾನಿಗಳ ಜೊತೆ ಎಂ.ವೆಂಕಯ್ಯ ನಾಯ್ಡು ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಎಂಜಿಕೆ ಮೆನನ್ ಪ್ರಯೋಗಾಲಯಕ್ಕೂ ಭೇಟಿ ನೀಡಿದರು.

ಬಳಿಕ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ದೇಶದ ಪಾರಂಪರಿಕ ಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದ ಪ್ರಗತಿಗೆ ವಿಜ್ಞಾನಿಗಳು, ಸಂಶೋಧಕರು ಕೊಡುಗೆ ನೀಡಬೇಕು ಎಂದು ಹೇಳಿದರು.

ಸ್ವಾವಲಂಬಿ ಭಾರತ್ ನಿರ್ಮಾಣ ಮಾಡಲು ವೈಜ್ಞಾನಿಕ ಸಮುದಾಯ ಕಾರ್ಯೋನ್ಮುಖವಾಗಬೇಕು. ದೇಶದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ವಿಜ್ಞಾನಿಗಳು ಮತ್ತು ತಂತ್ರಜ್ಞರು ಪ್ರಮುಖ ವೈಜ್ಞಾನಿಕ ಸೌಲಭ್ಯಗಳನ್ನು ಕಲ್ಪಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.

ಈ ಸಂಶೋಧನಾ ಕೇಂದ್ರದಲ್ಲಿನ ಸೌಲಭ್ಯಗಳು ಅತ್ಯುನ್ನತ ಮಟ್ಟದಲ್ಲಿದ್ದು, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಮೂಲಸೌಕರ‍್ಯ ಕಲ್ಪಿಸಲಾಗಿದೆ. ಇದು ದೇಶದ ಸ್ವಾವಲಂಬನೆಗೆ ಮತ್ತು ಭವಿಷ್ಯದ ಪೀಳಿಗೆಗೆ ಸಹಕಾರಿಯಾಗಲಿದೆ ಎಂದರು. ಜನಸಾಮಾನ್ಯರು ಮತ್ತು ಮಕ್ಕಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆ ಬೆಳಸಲು ಇಲ್ಲಿನ ಕೇಂದ್ರ ಕಾರ್ಯೋನ್ಮುಖವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಲ್ಲಿನ ಆಸ್ಟ್ರೋಫಿಜಿಕ್ಸ್ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ಉಪರಾಷ್ಟ್ರಪತಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿ ಅವರನ್ನು ರಾಜ್ಯಪಾಲ ವಜೂಬಾಯ್ ವಾಲಾ, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಬರಮಾಡಿಕೊಂಡರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com