ಅಘನಾಶಿನಿ ಅಳಿವೆಯನ್ನು ಜೌಗು ಪ್ರದೇಶವನ್ನಾಗಿ ಘೋಷಿಸಲು ಒತ್ತಾಯ

ಕರ್ನಾಟಕ ಶ್ರೀಮಂತ ಜೀವವೈವಿಧ್ಯಕ್ಕೆ ಪ್ರಸಿದ್ಧಿ ಪಡೆದಿದ್ದರೂ, ರಾಮ್ಸರ್ ಪ್ರದೇಶ ಹೊಂದಿರದ ಕೆಲವೇ ಕೆಲವು ರಾಜ್ಯಗಳ ಪೈಕಿ ಒಂದಾಗಿದೆ. 
ಅಘನಾಶಿನಿ ನದಿ ಪ್ರದೇಶ
ಅಘನಾಶಿನಿ ನದಿ ಪ್ರದೇಶ

ಬೆಂಗಳೂರು: ಕರ್ನಾಟಕ ಶ್ರೀಮಂತ ಜೀವವೈವಿಧ್ಯಕ್ಕೆ ಪ್ರಸಿದ್ಧಿ ಪಡೆದಿದ್ದರೂ, ರಾಮ್ಸರ್ ಪ್ರದೇಶ ಹೊಂದಿರದ ಕೆಲವೇ ಕೆಲವು ರಾಜ್ಯಗಳ ಪೈಕಿ ಒಂದಾಗಿದೆ. 

ಈ ಕಾರಣದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಘನಾಶಿನಿ ನದಿಯ ಅಳಿವೆ (ನದಿಮುಖ) ಪ್ರದೇಶದಲ್ಲಿರುವ ಜೌಗು ಹಾಗೂ ಮ್ಯಾಂಗ್ರೋವ್ ಗಳನ್ನು ರಕ್ಷಿಸುವ ಸಲುವಾಗಿ ಐಐಎಸ್ ಸಿ ಸಂಶೋಧಕರು ಹಾಗೂ ಪರಿಸರ ವಿಜ್ಞಾನಿಗಳು ಮತ್ತು ಸಮುದ್ರ ಜೀವಶಾಸ್ತ್ರಜ್ಞರು ಅಘನಾಶಿನಿ ನದಿಮುಖ ಪ್ರದೇಶವನ್ನು ರಾಮ್ಸಾರ್ ಕನ್ವೆನ್ಷನ್ ಪ್ರದೇಶವೆಂದು ಘೋಷಿಸುವುದಕ್ಕೆ ಒತ್ತಾಯಿಸಿದ್ದಾರೆ. 

ನೀರಿರುವ ತೇವ ಭೂಮಿಗಳು ಅನೇಕ ಅಪರೂಪದ ಸಸ್ಯಗಳಿಗೆ ಹಾಗೂ ಜಲಜೀವಿಗಳಿಗೆ ಆಶ್ರಯತಾಣವಾಗಿದೆ. ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ಯಾಸ್ಪಿಯನ್‌ ಸಮುದ್ರ ತೀರದಲ್ಲಿರುವ ಜೌಗು ಪ್ರದೇಶ ರಾಮ್ಸರ್ ನಲ್ಲಿ ಸಭೆ ನಡೆದು 1975 ರಿಂದ ರಾಮ್ಸಾರ್ ಕನ್ವೆನ್ಷನ್ ಗೆ ಸಹಿ ಹಾಕಲಾಗಿತ್ತು. ಅಂದಿನಿಂದ ರಾಮ್ಸಾರ್ ಕನ್ವೆನ್ಷನ್ ಪ್ರಕಾರವಾಗಿ ಜೌಗು ಪ್ರದೇಶಗಳು ಹಾಗೂ ಅಲ್ಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಜಗತ್ತಿನಾದ್ಯಂತ ಮಾಡಲಾಗುತ್ತಿದ್ದು ಹಲವು ಪ್ರದೇಶಗಳನ್ನು ರಾಮ್ಸಾನ್ ಸೈಟ್ ಗಳೆಂದು ಘೋಷಿಸಲಾಗುತ್ತಿದೆ. 

ಈಗ ಅಘನಾಶಿನಿಯಾದ್ಯಂತ ಇರುವ ಪ್ರದೇಶವನ್ನು ರಾಮ್ಸಾರ್ ಸೈಟ್ ಎಂದು ಘೋಷಿಸುವುದಕ್ಕೆ ಆಗ್ರಹಿಸಲಾಗುತ್ತಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪರಿಸರ ವಿಜ್ಞಾನ ಕೇಂದ್ರದ ಪ್ರೊಫೆಸರ್ ಟಿ ವಿ ರಾಮಚಂದ್ರ ಅವರು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ್ ಹೆಗ್ಡೆ ಆಶಿಸರ್ ಅವರನ್ನು ದೀರ್ಘಾವಧಿಯ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. 

ಲೇಕ್ 2020: ಪರಿಸರ ವ್ಯವಸ್ಥೆಯ ರಚನೆ, ಕಾರ್ಯ, ಸರಕು ಮತ್ತು ಸೇವೆಗಳ ಕುರಿತು ಸಮಾವೇಶ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ರಾಮ್ಸಾರ್ ಮಂಡಳಿಗೆ ಪ್ರಸ್ತಾವನೆ ಕಳಿಸಲಾಗಿತ್ತು. ಇದಕ್ಕೆ ಒಪ್ಪಿಗೆಯನ್ನೂ ನೀಡಿದ ಮಂಡಳಿ, ಪರಿಸರ  ಸಚಿವಾಲಯಕ್ಕೆ ಔಪಚಾರಿಕ ಪ್ರಸ್ತಾವನೆ ಕಳಿಸುವಂತೆಯೂ ಕೇಳಿತ್ತು. ಸಚಿವಾಲಯ ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯನ್ನು ಕೇಳಿತ್ತು. ಆದರೆ ಯಾವುದೂ ಪ್ರಯೋಜನವಾಗಿಲ್ಲ.  ಈಗ ನಾವು ಜೀವವೈವಿಧ್ಯ ಮಂಡಳಿಗೆ ಪ್ರಸ್ತಾವನೆಯ ಬಗ್ಗೆ ಗಮನ ಹರಿಸುವಂತೆ ಕೇಳಿದ್ದೇವೆ ಎಂದು ಅವರು ಹೇಳಿದ್ದಾರೆ. 

ಅಘನಾಶಿನಿಯಾದ್ಯಂತ ನಾಲ್ಕು ತಾಣಗಳನ್ನು ಹಾಗೂ ಕಾಳಿ ನದಿಯಾದ್ಯಂತ ನಾಲ್ಕು ತಾಣಗಳನ್ನು ರಾಮ್ಸಾರ್ ಪ್ರದೇಶವೆಂದು ಘೋಷಣೆ ಮಾಡುವುದಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. ಅಘನಾಶಿಯ ಹಿನ್ನೀರಿನ ಪ್ರದೇಶವನ್ನು ಸಂಪೂರ್ಣ ರಾಮ್ಸಾರ್ ಪ್ರದೇಶವನ್ನಾಗಿ ಘೋಷಣೆ ಮಾಡಿದರೆ ಉತ್ತಮ, ಅದರಿಂದ ಸಂರಕ್ಷಣೆಗೆ ಅಂತಾರಾಷ್ಟ್ರೀಯ ನಿಧಿ ಲಭ್ಯವಾಗಲಿದೆ. 1,800 ಎಕರೆ ಪ್ರದೇಷವನ್ನು ವಾಣಿಜ್ಯೀಕರಣದಿಂದ ರಕ್ಷಿಸಬಹುದೆಂದು ಎಂದು ಸಮುದ್ರ ಜೀವಶಾಸ್ತ್ರಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com